ಮೂಡಿಗೆರೆ, ಅಕ್ಟೋಬರ್ 18: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳ್ಳದ ಗಂಡಿ ಪ್ರದೇಶದ ಕಾಫಿ ಬೋರ್ಡ್ ಪಕ್ಕದಲ್ಲಿ ಒಂಟಿ ಕಾಡಾನೆಯೊಂದು ಕಂಡುಬಂದಿದೆ ಎಂದು ಅರಣ್ಯ ಇಲಾಖೆ ಮೂಡಿಗೆರೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ಪ್ರಕಟಣೆ ತಿಳಿಸಿದೆ.
ದಿನಾಂಕ 18-10-2026ರ ಸಂಜೆ 4:28ರ ವೇಳೆಗೆ ಕಾಡಾನೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಳ್ಳದ ಗಂಡಿ, ಚಿಕ್ಕಳ್ಳ ಹಾಗೂ ಹೆಸ್ಗಲ್ ಗ್ರಾಮಗಳ ಸುತ್ತಮುತ್ತಲಿನ ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಬೇಕು. ಸಾರ್ವಜನಿಕರು ಕಾಡಾನೆಯ ಸಮೀಪಕ್ಕೆ ಹೋಗುವುದು, ಅದನ್ನು ಹಿಂಬಾಲಿಸುವುದು ಅಥವಾ ಪ್ರಚೋದಿಸುವಂತಹ ಚಟುವಟಿಕೆಗಳಲ್ಲಿ ತೊಡಗಬಾರದು. ಕಾಡಾನೆ ಕಾಣಿಸಿಕೊಂಡ ಪ್ರದೇಶದಲ್ಲಿ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಿ, ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಸಾರ್ವಜನಿಕರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿ, ತಮ್ಮ ಸುರಕ್ಷತೆಯೊಂದಿಗೆ ಇತರರ ಸುರಕ್ಷತೆಯ ಬಗ್ಗೆಯೂ ಗಮನಹರಿಸಬೇಕು.
ಪ್ರಕಟಣೆ: ಅರಣ್ಯ ಇಲಾಖೆ, ಮೂಡಿಗೆರೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು.
ದಿನಾಂಕ: 18-10-2026
ಸಮಯ: ಸಂಜೆ 4:28.