ಮೂಡಿಗೆರೆ, ನವೆಂಬರ್ 22:
ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಭಾನುವಾರ (ನ.22) ಮುಂಜಾನೆ 4.04ರ ವೇಳೆಗೆ ಕಾರ್ ಬೈಲ್ ಶಿವಾನಂದ್ ಅವರ ತೋಟದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಕಾಡಾನೆಗಳ ಗುಂಪು ಬಾರದಹಳ್ಳಿ, ಚಂದ್ರಪುರ, ಕಮ್ಮಾರಗೋಡು, ತುದಿಯಾಲ ಹಾಗೂ ನಂದೀಪುರ ಹಾಂದಿ ಭಾಗಗಳಲ್ಲಿ ಸಂಚರಿಸುವ ಸಾಧ್ಯತೆ ಇರುವುದರಿಂದ ಈ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಜಾಗ್ರತೆ ವಹಿಸುವಂತೆ ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಮನವಿ ಮಾಡಿದೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆ:

ಕಾಡಾನೆಗಳು ಸಂಚರಿಸುತ್ತಿರುವ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗಿನ ವಾಕಿಂಗ್‌ಗೆ ತೆರಳಬಾರದು.

ಅರಣ್ಯ ಇಲಾಖೆಯ ಅನುಮತಿ ಹಾಗೂ ಮಾಹಿತಿ ಪಡೆಯದೆ ತೋಟಗಳಿಗೆ ತೆರಳಿ ಯಾವುದೇ ಕೆಲಸಗಳನ್ನು ನಿರ್ವಹಿಸಬಾರದು.

ಕಾಡಾನೆಗಳ ಸಂಚಾರವಿರುವ ಪ್ರದೇಶಗಳ ಬಯಲು ಜಾಗಗಳಲ್ಲಿ ಹಸು, ಕುರಿಗಳನ್ನು ಮೇಯಿಸಲು ತೆರಳಬಾರದು.

ಕಾಡಾನೆಗಳನ್ನು ನೋಡುವ ಉದ್ದೇಶದಿಂದ ಅಥವಾ ಫೋಟೋ, ವಿಡಿಯೋ ಚಿತ್ರೀಕರಣ ಮಾಡಲು ಸ್ಥಳಗಳಿಗೆ ತೆರಳಬಾರದು.

ಯಾವುದೇ ಚಟುವಟಿಕೆ ಕೈಗೊಳ್ಳುವ ಮೊದಲು ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದು ಮುಂದುವರಿಯಬೇಕು.

ಆನೆಗಳ ಸಂಚಾರ ಕಂಡುಬಂದಲ್ಲಿ ಮಾಹಿತಿ ನೀಡಿ:

ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ಇವರ ಸಹಾಯವಾಣಿ ಸಂಖ್ಯೆ 7204004261 ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಲಾಗಿದೆ.

ಈಗಾಗಲೇ ವಾಟ್ಸಾಪ್ ಮೂಲಕ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆಯಿಂದ ರವಾನೆಯಾಗುತ್ತಿರುವ ತುರ್ತು ಎಚ್ಚರಿಕೆ ಸಂದೇಶಗಳನ್ನು ಸಾರ್ವಜನಿಕರು ನಿರ್ಲಕ್ಷಿಸದೆ, ಅವುಗಳನ್ನು ತಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಗ್ರಾಮಸ್ಥರೊಂದಿಗೆ ಹಂಚಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

ಕಾಡಾನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟಲು ಸಾರ್ವಜನಿಕರು ಅರಣ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.