ಮೂಡಿಗೆರೆ, ನವೆಂಬರ್ 14: ಮೂಡಿಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಒಂಟಿ ಕಾಡಾನೆಯೊಂದು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ನವೆಂಬರ್ 14ರಂದು ಸಂಜೆ 5.20ರ ವೇಳೆಗೆ ಒಂಟಿ ಕಾಡಾನೆಯೊಂದು ತಿರುಗುಣ–ನೆರಡಿ ರಸ್ತೆಯನ್ನು ದಾಟಿ ಹಲಸುಮನೆ ಹಾಗೂ ವಾಜುಹಳ್ಳಿ ಭಾಗದ ಕಡೆಗೆ ಸಂಚರಿಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹೆಚ್ಚಿನ ಜಾಗರೂಕತೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಇದೇ ದಿನ ರಾತ್ರಿ 8.50ರ ವೇಳೆಗೆ ಮತ್ತೊಂದು ಎಚ್ಚರಿಕೆ ಪ್ರಕಟಣೆ ಹೊರಡಿಸಿರುವ ಅರಣ್ಯ ಇಲಾಖೆ, ಒಂಟಿ ಕಾಡಾನೆಯೊಂದು ಕಂಚೇನಹಳ್ಳಿ ಭಾಗದಲ್ಲಿ ಕಾಣಿಸಿಕೊಂಡು ಸಂಚರಿಸುತ್ತಿರುವುದಾಗಿ ತಿಳಿಸಿದೆ. ಕದ್ರಿಮಿದ್ರಿ, ಆಲದಗುಡ್ಡೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:

ಕಾಡಾನೆ ಸಂಚರಿಸುವ ಪ್ರದೇಶಗಳಲ್ಲಿ ಅನಗತ್ಯವಾಗಿ ಓಡಾಡಬಾರದು.

ರಾತ್ರಿ ಸಮಯದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು.

ತೋಟ, ಗದ್ದೆ ಹಾಗೂ ಕಾಡಂಚಿನ ಪ್ರದೇಶಗಳಿಗೆ ತೆರಳುವಾಗ ಜಾಗರೂಕರಾಗಿರಬೇಕು.

ಕಾಡಾನೆ ಕಂಡುಬಂದಲ್ಲಿ ಅದರ ಸಮೀಪಕ್ಕೆ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.

ಆನೆ ಸಂಚಾರ ಕಂಡುಬಂದಲ್ಲಿ ಮಾಹಿತಿ ನೀಡಿ:

ತಮ್ಮ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು ಇವರಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಕೋರಿದೆ.

ಸಂಪರ್ಕ ಸಂಖ್ಯೆ: 7204004261

ಕಾಡಾನೆಗಳ ಸಂಚಾರದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿದ್ದು, ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿದೆ.