ದುಬೈ, ಅಕ್ಟೋಬರ್ 1, 2026:
ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆ ವೇಳೆ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ತೋರಿದ ಧೈರ್ಯ ಇದೀಗ ವ್ಯಾಪಕವಾಗಿ ಗಮನ ಸೆಳೆದಿದೆ.
ಸೆಪ್ಟೆಂಬರ್ 30ರಂದು ಫ್ಲೈದುಬೈಯ FZ1073 ವಿಮಾನವು ಪ್ರಯಾಣಿಸುತ್ತಿದ್ದ ವೇಳೆ ಕಾಕ್ಪಿಟ್ನಲ್ಲಿ ಸಹಪೈಲಟ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ದಾಳಿಯಲ್ಲಿ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗಿದ್ದರೂ, ವಿಮಾನದ ನಿಯಂತ್ರಣವನ್ನು ಕಳೆದುಕೊಳ್ಳದಂತೆ ತುರ್ತು ಕ್ರಮ ಕೈಗೊಂಡರು.
ವರದಿಗಳ ಪ್ರಕಾರ, ವಿಮಾನವು ಕೆಲವೇ ಕ್ಷಣಗಳಲ್ಲಿ ಸುಮಾರು 14,000 ಅಡಿಗಳಷ್ಟು ಎತ್ತರ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಕಾಕ್ಪಿಟ್ ಬಾಗಿಲು ತೆರೆಯಲು ಸಾಧ್ಯವಾಗುವಂತೆ ಕ್ರಮ ಕೈಗೊಂಡಿದ್ದು, ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಇತರ ಸಿಬ್ಬಂದಿ ಕಾಕ್ಪಿಟ್ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ನೆರವಾದರು.
ಪ್ರಯಾಣಿಕರಲ್ಲಿ ಕೆಲವರು ದಾಳಿಕೋರನನ್ನು ನಿಯಂತ್ರಿಸಲು ನೆರವಾದರೆ, ಮತ್ತೊಬ್ಬರು ಗಾಯಗೊಂಡ ಕ್ಯಾಪ್ಟನ್ಗೆ ಪ್ರಾಥಮಿಕ ನೆರವು ನೀಡಿದರು. ನಂತರ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಪ್ರಕ್ರಿಯೆಯಲ್ಲಿ ಸಹಾಯ ಮಾಡಲಾಯಿತು. ವಿಮಾನದಲ್ಲಿದ್ದ 174 ಮಂದಿಯ ಜೀವ ಉಳಿದಿದೆ ಎಂದು ಹಲವು ವರದಿಗಳು ತಿಳಿಸಿವೆ.
ಈ ಘಟನೆ ವಿಮಾನಯಾನ ಕ್ಷೇತ್ರದಲ್ಲಿ ತೀವ್ರ ಗಮನ ಸೆಳೆದಿದ್ದು, ಘಟನೆಯ ಸ್ವರೂಪ ಮತ್ತು ಕಾರಣಗಳ ಕುರಿತು ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಭಾರತದ ನಾಗರಿಕ ವಿಮಾನಯಾನ ಇಲಾಖೆಯ ಕಾರ್ಯದರ್ಶಿ ಕೂಡ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಉಲ್ಲೇಖಿಸಿ, ಘಟನೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಂಕಷ್ಟದ ಕ್ಷಣದಲ್ಲಿ ಧೈರ್ಯದ ನಿರ್ಧಾರ
ವಿಮಾನ ಸಾವಿರಾರು ಅಡಿ ಎತ್ತರದಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ದಾಳಿಯ ನಡುವೆಯೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕೈಗೊಂಡ ತುರ್ತು ಕ್ರಮಗಳು ಮತ್ತು ಪ್ರಯಾಣಿಕರ ಸಹಕಾರದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಈ ಘಟನೆಯ ಕುರಿತು ಸಂಪೂರ್ಣ ತನಿಖೆ ಮತ್ತು ಅಧಿಕೃತ ವರದಿ ಹೊರಬಂದ ಬಳಿಕವೇ ದಾಳಿಯ ಉದ್ದೇಶ ಹಾಗೂ ಇತರ ವಿವರಗಳ ಬಗ್ಗೆ ಅಂತಿಮ ಸ್ಪಷ್ಟತೆ ದೊರೆಯಲಿದೆ.
ಕ್ಯಾಪ್ಟನ್ ಸ್ಮಿತ್ ಮಚ್ಚರ್ – ನಿಮಗಿದು ಗೌರವದ ಸಲಾಂ..
GNE UPDATES
ಇತ್ತೀಚಿನ ಸುದ್ದಿ