ಮೂಡಿಗೆರೆ, ನ.23: ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಬಾರದಹಳ್ಳಿ ಬಿಳಿಗೌಡ್ರು ತೋಟದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮಾಕೋನಹಳ್ಳಿ, ನಂದೀಪುರ, ಮೂಡಸಸಿ, ತುದಿಯಲ, ಬಾರದಹಳ್ಳಿ, ಚಂದ್ರಪುರ, ಹೊರಟ್ಟಿ, ಘಟ್ಟದಹಳ್ಳಿ, ದುಂಡುಗ, ಕೆಲ್ಲೂರು, ಗೌರಿಕೆರೆ, ಬಸ್ಕಲ್ ಹಾಗೂ ಕನ್ನಾಪುರ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಇರುವ ಸಾಧ್ಯತೆಯಿರುವುದರಿಂದ ಗ್ರಾಮಸ್ಥರು ಹಾಗೂ ತೋಟದ ಮಾಲೀಕರು ಜಾಗರೂಕತೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದು, ಕಲ್ಲು ಎಸೆಯುವುದು ಅಥವಾ ಕೋಲುಗಳಿಂದ ಹೊಡೆಯಲು ಪ್ರಯತ್ನಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇಂತಹ ಕೃತ್ಯಗಳಿಂದ ಆನೆಗಳು ಗಾಬರಿಗೊಂಡು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಲಾಗಿದೆ.

ಅಲ್ಲದೆ, ಕಾಡಾನೆಗಳ ಸಂಚಾರವಿರುವ ಪ್ರದೇಶಗಳ ಸುತ್ತಮುತ್ತಲಿನ ತೋಟಗಳಲ್ಲಿ ಕೆಲಸ ನಿರ್ವಹಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸುರಕ್ಷತೆಗೆ ಆದ್ಯತೆ ನೀಡುವಂತೆ ತೋಟದ ಮಾಲೀಕರು ಹಾಗೂ ಕಾರ್ಮಿಕರಿಗೆ ಸೂಚಿಸಲಾಗಿದೆ.

ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ತಂಡಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ.

ತುರ್ತು ಸಂಪರ್ಕ ಸಂಖ್ಯೆ: 7204004261

ಪ್ರಕಟಣೆಯ ಸಮಯ: 23-11-2026, ಬೆಳಿಗ್ಗೆ 09:50

ಸಾರ್ವಜನಿಕರು ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ, ತಮ್ಮ ಹಾಗೂ ಇತರರ ಜೀವದ ಸುರಕ್ಷತೆಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.