ಮೂಡಿಗೆರೆ, ನವೆಂಬರ್ 25: ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಕಾಡಾನೆಗಳ ಸಂಚಾರದ ಕುರಿತು ತುರ್ತು ಎಚ್ಚರಿಕೆ ನೀಡಲಾಗಿದೆ.

ಕಾರ್ ಬೈಲು ಗ್ರಾಮದ ಪ್ರಹ್ಲಾದ್ ಅವರ ತೋಟದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿರುವುದಾಗಿ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಬಾರದಹಳ್ಳಿ, ಮಾಕೋನಹಳ್ಳಿ, ಹೊರಟ್ಟಿ, ಘಟ್ಟದಹಳ್ಳಿ, ಕೆಲ್ಲೂರು, ದುಂಡುಗ, ಕುನ್ನಹಳ್ಳಿ, ಹಳಸೆ, ಮೂಡಸಸಿ, ತುದಿಯಲ, ಬಾರೀಕೆರೆ, ಗೌತಹಳ್ಳಿ, ಪುರ, ಗಬ್ಬಳ್ಳಿ, ಬೇವಿನಗುಡ್ಡೆ, ಕಾರ್ ಬೈಲು ಹಾಗೂ ಚಟ್ಟನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳು:

ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸದಿರಿ.

ತೋಟ, ಗದ್ದೆ ಹಾಗೂ ಕಾಫಿ ಎಸ್ಟೇಟ್‌ಗಳಿಗೆ ತೆರಳುವಾಗ ಎಚ್ಚರಿಕೆ ವಹಿಸಿ.

ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಸಮೀಪ ಹೋಗುವುದು, ಫೋಟೋ ಅಥವಾ ವಿಡಿಯೋ ತೆಗೆಯಲು ಪ್ರಯತ್ನಿಸುವುದು ಬೇಡ.

ಕಾಡಾನೆಗಳನ್ನು ಓಡಿಸಲು ಅಥವಾ ಪ್ರಚೋದಿಸಲು ಪ್ರಯತ್ನಿಸಬೇಡಿ.

ವಾಹನ ಸವಾರರು ರಸ್ತೆಗಳಲ್ಲಿ ಸಂಚರಿಸುವಾಗ ವಿಶೇಷ ಜಾಗ್ರತೆ ವಹಿಸಿ.

ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು ಇವರಿಗೆ 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

ಕಾಡಾನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ, ತಮ್ಮ ಹಾಗೂ ಇತರರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಲಾಗಿದೆ.

ಮಾಹಿತಿ ಪ್ರಕಟಣೆ: ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು ಹಾಗೂ ಅರಣ್ಯ ಇಲಾಖೆ, ಮೂಡಿಗೆರೆ.

ದಿನಾಂಕ: 25-11-2026
ಸಮಯ: ರಾತ್ರಿ 8:30 ಗಂಟೆ.