ಮೂಡಿಗೆರೆ, ನವೆಂಬರ್ 28: ಚಿಕ್ಕಮಗಳೂರು ಜಿಲ್ಲಾ ಆನೆ ಕಾರ್ಯಪಡೆ ಹಾಗೂ ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಲ್ಲೇಶ್ ಅವರ ತೋಟದಲ್ಲಿ ಕಾಡಾನೆಯೊಂದು ಸಂಚರಿಸುತ್ತಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಘಟ್ಟದಹಳ್ಳಿ, ಮಾಕೋನಹಳ್ಳಿ, ಹೊರಟ್ಟಿ, ಬಾರದಹಳ್ಳಿ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತಲಿನ ನಿವಾಸಿಗಳು, ತೋಟದ ಕಾರ್ಮಿಕರು ಮತ್ತು ವಾಹನ ಸವಾರರು ಹೆಚ್ಚಿನ ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಈ ಭಾಗದ ಕಾಫಿ ತೋಟಗಳಲ್ಲಿ ಯಾರೂ ಕೆಲಸಕ್ಕೆ ತೆರಳಬಾರದು ಎಂದು ಸೂಚಿಸಲಾಗಿದ್ದು, ಕಾಡಾನೆಗಳು ಕಂಡುಬಂದಲ್ಲಿ ಗಾಬರಿಗೊಳ್ಳದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಆನೆಗಳನ್ನು ಓಡಿಸಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.

ತಮ್ಮ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು – 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನಾಂಕ: 28-11-2026
ಸಮಯ: ಬೆಳಿಗ್ಗೆ 10:00 ಗಂಟೆ

ಸಾರ್ವಜನಿಕರು ಎಚ್ಚರಿಕೆಯಿಂದಿರಿ –