ಮಂಗಳೂರು, ಸೆ.17: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಇಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಆದಿದ್ರಾವಿಡ ಸಮುದಾಯಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ಜೊತೆ ಕಾರ್ಯದರ್ಶಿ ಸುರೇಶ್ ಪಿ.ಬಿ. ಹಾಗೂ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಾಳೆ ನಡೆಯಲಿರುವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ, ಆದಿದ್ರಾವಿಡ ಸಮುದಾಯದ ಕುಲದೈವಗಳ ಮೂಲಕ್ಷೇತ್ರವಾದ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ, ಮಿಜಾರ್, ಮೂಡುಬಿದಿರೆ ಇದರ ಜೀರ್ಣೋದ್ಧಾರ ಕಾಮಗಾರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಅಲ್ಲದೆ, ಆದಿದ್ರಾವಿಡ ಸಮುದಾಯದ ಉಪಜಾತಿಯಾಗಿ ‘ಸಾರಮಾನಿ’ ಎಂಬ ಹೆಸರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಂಬಂಧ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅಗತ್ಯ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಯಿತು.
ಸಮುದಾಯದ ಅರ್ಹ ಫಲಾನುಭವಿಗಳಿಗೆ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ‘ಮನ್ಸ’ ಸಮುದಾಯದವರು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಜಾತಿಯನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿರುವುದನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತೀವ್ರವಾಗಿ ವಿರೋಧಿಸಿದರು.
‘ಮನ್ಸ’ ಸಮುದಾಯದ ಜನಸಂಖ್ಯೆ ಐದು ಲಕ್ಷ ಎಂದು ಹೇಳಲಾಗುತ್ತಿರುವುದನ್ನು ಪ್ರಶ್ನಿಸಿದ ಸಂಘದ ಪದಾಧಿಕಾರಿಗಳು, ಈ ಸಂಖ್ಯೆಯು ನಿಜವಾಗಿದ್ದರೆ ಕನಿಷ್ಠ ಒಂದು ಸಾವಿರ ಜನರನ್ನು ಒಗ್ಗೂಡಿಸಿ ಸಮಾವೇಶ ನಡೆಸಿ ತಮ್ಮ ಜನಸಂಖ್ಯೆಯನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಆದಿದ್ರಾವಿಡ ಸಮುದಾಯದ ಹಕ್ಕುಗಳು, ಗುರುತು ಹಾಗೂ ವಿವಿಧ ಬೇಡಿಕೆಗಳ ಕುರಿತು ಸರ್ಕಾರ ಸೂಕ್ತವಾಗಿ ಪರಿಶೀಲಿಸಿ, ಕಾನೂನು ಮತ್ತು ನಿಯಮಗಳ ಅನ್ವಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಆದಿದ್ರಾವಿಡ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಲಿ.
GNE UPDATES
ಇತ್ತೀಚಿನ ಸುದ್ದಿ