ಅಂಬೇಡ್ಕರ್ ‘ಯಾರು’ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅಂಬೇಡ್ಕರ್ ‘ಏನು’ ಎಂಬುದು ಎಲ್ಲರಿಗೂ ಗೊತ್ತಿಲ್ಲ. ಅದುವೇ ಬಹುಜನ ಸಮಾಜದ ದುರಂತವಾಗಿದೆ. ಅವರು ಜೀವನ ಪರ್ಯಂತ ಏತಕ್ಕಾಗಿ ಶ್ರಮಿಸಿದರೆ ಅದನ್ನು ಶೋಷಿತರು ಕಡೆಗಣಿಸಿದರು. ಬದಲಾಗಿ ಅವರು ಏನನ್ನು ಮಾಡಬೇಡಿರೆಂದರೊ ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದಾರೆ! ಇದಕ್ಕಿಂತಲೂ ವಿಪರ್ಯಾಸ ಬೇರೇನಿದೆ!

ಅಂಬೇಡ್ಕರ್ ಎಂದರೆ ಮಹರ್ ಜನಾಂಗದಲ್ಲಿ ಜನಿಸಿದಾತ. ಅವರಿಗೆ ಬಡತನವಿತ್ತು. ಬಾಲ್ಯದಿಂದಲೂ ಅವರಿಗೆ ವಿಪರೀತ ಅವಮಾನಗಳಾದವು. ಅಷ್ಟೆಲ್ಲವನ್ನೂ ಸಹಿಸಿಕೊಂಡು ಅವರು ಉನ್ನತ ಮಟ್ಟಕ್ಕೇರಿದರು. ಸಂವಿಧಾನ ಬರೆದರು. ಕೆರೆಯ ನೀರು ಕುಡಿಯಲು ಹೋರಾಡಿದರು. ದೇವಸ್ಥಾನಕ್ಕೆ ನುಗ್ಗಲು ಚಳವಳಿ ಮಾಡಿದರು. ಕಡೆಗಾಲದಲ್ಲಿ ಹೋಗಿ ಬೌದ್ಧ ಧರ್ಮ ಸ್ವೀಕರಿಸಿದರು. ಕೊನೆಗೊಂದು ದಿನ ತೀರಿಕೊಂಡರು. ಇಷ್ಟು ಅಂಬೇಡ್ಕರ್ ಎಂದು ಎಲ್ಲರಿಗೂ ಗೊತ್ತು. ಏಪ್ರಿಲ್ 14 ಮತ್ತು ಡಿಸೆಂಬರ್ 6 ರಂದು ಅನೇಕರು ಮಾಡುವುದು ಇದೇ ಭಾಷಣವನ್ನು. ಇದನ್ನೇ 50 ವರ್ಷಗಳಿಂದಲೂ ಹೇಳುತ್ತಿದ್ದಾರೆ. ಶೋಷಿತರು ಕೇಳಿ ಚಪ್ಪಾಳೆ ಹೊಡೆಯುತ್ತಿದ್ದಾರೆ! ಇದರಿಂದ ಏನಾದರೂ ಸ್ಫೂರ್ತಿ ಸಿಕ್ಕಿತಾ? ಏನಾದರು ಸಂದೇಶ ಸಿಕ್ಕಿತಾ?
ಅಂಬೇಡ್ಕರ್ ಎಂದರೆ “ಏನು” ಎಂದು ಗೊತ್ತಾದರೆ ಅವರ ಸಂದೇಶಗಳು ತಿಳಿಯುತ್ತವೆ. ಮತ್ತು ಅವರ ಸಂದೇಶಗಳು ಏನನ್ನಾದರು ಸಾಧಿಸಲು ದಾರಿ ತೋರುತ್ತವೆ. ಅವರ ಸಂದೇಶಗಳಿಂದ ಅವರು ಧಾರ್ಮಿಕ ನಾಯಕರೊ…. ಆಧ್ಯಾತ್ಮಿಕ ನಾಯಕರೊ… ಅಥವಾ ರಾಜಕೀಯ ನಾಯಕರೊ ಎಂಬುದು ಸ್ಪಷ್ಟವಾಗುತ್ತದೆ. ಅದಲ್ಲದೆ ಹೋದರೆ, ಶೋಷಿತರೆಲ್ಲರು ಒಂದಾಗಲು ಸಾಧ್ಯವೇ ಇಲ್ಲ. ಕೆಲವರು ಬಾಬಾಸಾಹೇಬರು ಧಾರ್ಮಿಕ ನಾಯಕರು, ನಾವು ಬರೇ ಧರ್ಮ ಬೆಳೆಸಿದರೆ ಉದ್ದಾರ ವಾಗಬಹುದು ಎಂತಲೂ… ಆಧ್ಯಾತ್ಮಿಕ ನಾಯಕರೆಂದು ವಾದಿಸುವವರು ಅವರಿಗೆ ಭಯ ಭಕ್ತಿಯಿಂದ ಕೈ ಮುಗಿದರೆ ನಮ್ಮ ವಿಮೋಚನೆ ಸಾಧ್ಯವೆಂತಲೂ… ಚರ್ಚಿಸುತ್ತಲೇ ಕದನ ಕಾಯುತ್ತಾ ಮುಗ್ಧರನ್ನು ದಿಕ್ಕು ತಪ್ಪಿಸುವುದು ನಿಲ್ಲುವುದಿಲ್ಲ. ಹಾಗಾಗಿ ನಾವೀಗ ತುರ್ತಾಗಿ ನಿಜಕ್ಕೂ ಅಂಬೇಡ್ಕರ್ರವರು ಯಾತಕ್ಕಾಗಿ ಹೋರಾಡಿದರು ಎಂಬುದನ್ನು ಅವರ 16 ಸಂಪುಟಗಳನ್ನು ಓದಿ ಅರಿಯಬೇಕು.
1920ರಿಂದಲೂ ರಾಜಕೀಯ ಅಧಿಕಾರ ಕುರಿತ ಅವರ ನಿಲುವು
“The Problem of the Scheduled castes was essentially POLITICAL, you must acquire a hold on the political machine, use it to solve your numerous problems. Nobody can remove your grievances as well as you and you can not remove them unless you got political power in your hands” (Depressed class conference held at Nagpur in 1930)

ಇದಕ್ಕಿಂತಲೂ ಸ್ಪಷ್ಟವಾಗಿ ಇನ್ನೇನು ಹೇಳಬೇಕು? ಸ್ವತಃ ಶೋಷಿತರ ಸಮ್ಮೇಳನದಲ್ಲಿಯೇ ರಾಜಕೀಯ ಶಕ್ತಿಯನ್ನು ಕೈಗೆತ್ತಿಕೊಳ್ಳಿ. ಅದನ್ನೊರತು ಪಡಿಸಿ ಇನ್ನಾವುದರಿಂದಲೂ ನಿಮ್ಮ ಅಸಂಖ್ಯಾತ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲಾಗುವುದಿಲ್ಲ ಎಂದು ಕರೆ ನೀಡಿದ್ದಾರೆ. ಅಷ್ಟಲ್ಲದೆ “Political power is the master key through which you can unlock all the doors of progress” ಎಂದು ಸಾರಿ ಸಾರಿ ಹೇಳಿದ್ದಾರೆ. ಅವರ ಆಲೋಚನೆಗಳಲ್ಲಿ ಅವರ ಪ್ರತಿ ಹೋರಾಟದ ಗುರಿ ಒಂದೇ ಆಗಿತ್ತು ಅದು ಸ್ವತಂತ್ರ ರಾಜಕೀಯ ಶಕ್ತಿ. ಅವರು ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಅದನ್ನೇ ಪ್ರತಿಪಾದಿಸುತ್ತಿದ್ದರು ಎಂಬುದಕ್ಕೆ ಇಲ್ಲಿವೆ ನೋಡಿ ನಿದರ್ಶನಗಳು.

ನಿಮ್ಮ ವೃತ್ತಿ ಜೀವನದ ಸಮಸ್ಯೆಗಳ ಪರಿಹಾರಕ್ಕಾಗಿ ನೀವು ಒಂದು ಸಂಘ ರಚಿಸಿಕೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದಷ್ಟೇ ಸಾಲದು. ನೀವು ರಾಜಕೀಯ ಅಧಿಕಾರಕ್ಕಾಗಿಯೂ ಸಂಘಟಿತರಾಗಬೇಕು. ಕಾರ್ಮಿಕ ಸಂಘಟನೆಗಳು ರಾಜಕಾರಣಕ್ಕೆ ಪ್ರವೇಶ ಮಾಡಲೇಬೇಕು. ಯಾಕೆಂದರೆ ರಾಜಕೀಯ ಅಧಿಕಾರವಿಲ್ಲದೆ ನಿಮ್ಮ ನೌಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗದು. ನೀವು ಸಂಘಗಳಲ್ಲಿ ಒಗ್ಗೂಡುವುದರ ಜೊತೆಗೆ ರಾಷ್ಟ್ರ ರಾಜಕಾರಣದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ನಿರ್ಣಾಯಕ ಪಾತ್ರ ವಹಿಸಬೇಕು. ಸಂಘ ಕೇವಲ ಸಂಘವಾಗಿರಬೇಕು. ರಾಜಕೀಯ ಮಾಡಬಾರದು ಎನ್ನುವ ಕೆಲವು ಪುಣ್ಯಾತ್ಮರಿಗೆ ನಾನು ಹೇಳುವುದಿಷ್ಟೆ ಕಾರ್ಮಿಕರು ರಾಜಕೀಯದಿಂದ ದೂರವಿರಲು ತೀರ್ಮಾನಿಸಿದರೆ ಕಾರ್ಮಿಕರ ತಿಥಿಯಾಗುತ್ತದೆ! ರಾಜಕೀಯಕ್ಕೆ ಪ್ರವೇಶ ಮಾಡುವುದೆಂದರೆ ಒಂದು ಪಕ್ಷ ಕಟ್ಟುವುದು ಎಂದರ್ಥ,
ನನ್ನ ಸಮುದಾಯದ ಹಿತಕ್ಕಾಗಿ ನಾನು ರಾಜಕಾರಣಕ್ಕೆ ಧುಮುಕಿದೆ.
1920ರಿಂದಲೂ ನಾನು ಸಕ್ರಿಯ ರಾಜಕಾರಣದಲ್ಲಿದ್ದೇನೆ. ನಾನು ಸರ್ಕಾರಿ ಕೆಲಸಕ್ಕೆ ಸೇರಿದ್ದರೆ ಮಾಸಿಕ 5000ರೂ ಸಂಬಳ ಪಡೆದು ಹಾಯಾಗಿರಬಹುದಿತ್ತು. ಆದರೆ ನಾನು ಅಂತಹ ಅವಕಾಶಗಳನ್ನು ನಿರಾಕರಿಸಿ ರಾಜಕೀಯ ಪ್ರವೇಶಿಸಿದೆ. ಏಕೆಂದರೆ ಸರ್ಕಾರಿ ಸೇವೆಯಿಂದ ಜನಸೇವೆ ಮಾಡಲಾಗದು. ನನ್ನ ಸಮುದಾಯದ ಏಳಿಗೆಯೇ ನನ್ನ ಪರಮೋಚ್ಛ ಗುರಿ. ನನ್ನ ಜೀವನದ 30 ವರ್ಷಗಳಷ್ಟು ಸುದೀರ್ಘ ಸಮಯವನ್ನು ನನ್ನ ಸಮುದಾಯದ ಸೇವೆ ಮಾಡುತ್ತಾ ಕಳೆದಿದ್ದೇನೆ. ಅಧಿಕಾರಿಗಳಿಂದ ನಮ್ಮ ಪರ ಕೆಲಸಗಳಾಗುವಂತೆ ಮಾಡಲು ಸಾಧ್ಯವಿಲ್ಲ. ಆದರೆ ರಾಜಕೀಯ ಶಕ್ತಿಯಿಂದ ನಾವು ನಮ್ಮ ಜನರ ಹಿತವನ್ನು ಸುಲಭವಾಗಿ ಕಾಪಾಡಬಹುದು.
ಆದ್ದರಿಂದ ರಾಜಕೀಯ ಶಕ್ತಿಯನ್ನು ಹೆಗಲಿಗೇರಿಸಿಕೊಳ್ಳಿ
(ಜಲಂದರ್ನಲ್ಲಿ ದಿನಾಂಕ 27. 10.1951ರಲ್ಲಿ ಮಾಡಿದ ಭಾಷಣ.)

ಜೀವನದ ಅಂತ್ಯದವರೆವಿಗೂ ಬಾಬಾಸಾಹೇಬರ ನಿಲುವಿನಲ್ಲಿ ಒಂದು ಚೂರೂ ಬದಲಾವಣೆಯಾಗಿಲ್ಲ ಎಂಬುದಕ್ಕೆ 1951ರ ಈ ಭಾಷಣವೇ ಸಾಕ್ಷಿ. ಪರಿನಿಬ್ಬಾಣ ಹೊಂದುವಾಗಲೂ ಬಾಬಾಸಾಹೇಬರು ಕಣ್ಣೀರಿನೊಡನೆ ತಮ್ಮ ಕೊನೆಯ ಸಂದೇಶವನ್ನು ನೀಡುತ್ತಾರೆ. ಆಗಲೂ ಅವರು ತನ್ನ ಜನರು ಸ್ವಂತ ಶಕ್ತಿಯಿಂದ ರಾಜ್ಯವಾಳುವ ಆಶಯವನ್ನೇ ವ್ಯಕ್ತಪಡಿಸುತ್ತಾರೆ.
“ನನ್ನ ಅಂತರಾಳದ ನೋವು ಮತ್ತು ದುಃಖವನ್ನು ನೀವು ಅರಿಯಲಾರಿರಿ, ನನ್ನ ಜನ ರಾಜಕೀಯ ಅಧಿಕಾರವನ್ನು ಬೇರೆ ಸಮುದಾಯದವರೊಡನೆ ಸಮನಾಗಿ ಹಂಚಿಕೊಂಡು ಆಳುವ ವರ್ಗವಾಗುವುದನ್ನು ನಾನು ನನ್ನ ಜೀವಿತದಲ್ಲಿ ನೋಡಬೇಕೆಂದು ಇಚ್ಛಿಸಿದ್ದೆ. ಆದರೆ ಅದು ಸಾಧ್ಯವಾಗದು ಎನಿಸುತ್ತಿದೆ. ನನ್ನ ಹೋರಾಟದ ಫಲವನ್ನು ಕೆಲವೇ ಮಂದಿ ಅನುಭವಿಸುತ್ತಾ ಸಮುದಾಯದ ಹಿತವನ್ನು ಮರೆಯುತ್ತಿದ್ದಾರೆ. ನನ್ನ ಅವಿದ್ಯಾವಂತ ಸಮುದಾಯದ ಗತಿ ಏನೆಂದು ನೆನೆದು ನೊಂದಿದ್ದೇನೆ. ನಾನು ಈವರೆಗೆ ಏನನ್ನು ಸಾಧಿಸಿದ್ದೇನೊ ಅವೆಲ್ಲವನ್ನೂ ಘೋರವಾದ ನೋವು ಮತ್ತು ಕೊನೆಯೇ ಇಲ್ಲದ ಕಷ್ಟಗಳ ಹಾದಿಯಲ್ಲಿ ಜೀವಿತದುದ್ದಕ್ಕೂ ವಿರೋಧಿಗಳೊಡನೆ ಹೋರಾಡುತ್ತಾ ಸಾಧಿಸಿದ್ದೇನೆ. ಇದನ್ನು ನನ್ನ ಜನರಿಗೆ ಹೇಳು ನಾನಕ್ ಚಂದ್, ತುಂಬಾ ಶ್ರಮವಹಿಸಿ ನಾನು ಈ ವಿಮೋಚನಾ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಎಷ್ಟೇ ಅಪಾಯ, ಅಡೆತಡೆಗಳು ಬಂದರೂ ಅದು ಹಾಗೇ ಮುಂದೆ ಸಾಗಲಿ ಒಂದು ವೇಳೆ ಮುಂದಕ್ಕೆಳೆಯಲು ಶಕ್ತಿ ಇಲ್ಲದಿದ್ದರೆ ಅಲ್ಲಿಯೇ ಬಿಟ್ಟು ಬಿಡಿ. ಆದರೆ ಯಾವುದೇ ಕಾರಣಕ್ಕೂ ಹಿಂದಕ್ಕೆ ತಳ್ಳಬೇಡಿ…. ಬಹುಶಃ ನನ್ನ ಜನರಿಗೆ ಹೇಳುತ್ತಿರುವ ಕೊನೆಯ ಸಂದೇಶ ಇದಾಗಲಿದೆ……
*ಭೀಮ ನ ಕೊನೆ ಯ ಸಂದೇಶ*
” (ಜುಲೈ 31,1956 ಸಂಜೆ 5ರಲ್ಲಿ ನಾನಕ್ ಚಂದ್ ರತ್ತುರವರೊಡನೆ ಹಂಚಿಕೊಂಡ ಕಣ್ಣೀರಿನ ಕೊನೆಯ ಸಂದೇಶ.).

ಯಾವುದದು ಬಾಬಾಸಾಬೇಬರು ಎಳೆದು ತಂದ ವಿಮೋಚನಾ ರಥ? ಅದನ್ನು ಮುನ್ನಡೆಸುವ ವಿಚಾರದಲ್ಲಿ “ಸಾಧ್ಯವಾದರೆ ಮುಂದಕ್ಕೆಳೆಯಿರಿ” ಎಂಬ ಸಂಶಯ ಬಾಬಾಸಾಹೇಬ ರನ್ನು ಕಾಡಿದ್ದೇಕೆ? ಬಾಬಾಸಾಹೇಬರು ಕಣ್ಣೀರಿಡುತ್ತಾ ಕೊನೆಯುಸಿರಿಳೆದದ್ದು ಯಾಕೆ? ಸಂತೋಷದಿಂದ ತಮ್ಮ ಅನುಯಾಯಿಗಳ ಕೈಗೆ ವಿಮೋಚನಾ ರಥದ ಜವಾಬ್ದಾರಿ ನೀಡಿ ನೆಮ್ಮದಿಯಿಂದ ಏಕೆ ಅವರು ಪರಿನಿಬ್ಬಾಣ ಹೊಂದಲಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಕಂಡುಕೊಂಡರೆ ‘ಅಂಬೇಡ್ಕರ್ವಾದ’ ಅಂದರೇನು ….? ಅಂಬೇಡ್ಕರ್ರವರನ್ನು ನಿಜವಾಗಿ ಯಾವ ದೃಷ್ಟಿಯಲ್ಲಿ ನೋಡಬೇಕು ರಾಜಕೀಯ ನಾಯಕನಾಗಿಯೋ….? ಧಾರ್ಮಿಕ ಅಥವಾ ಆಧ್ಯಾತ್ಮಿಕ ನಾಯಕನಾಗಿಯೋ? ಎಂಬುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗೆ ಸ್ಪಷ್ಟವಾದಗಲೇ ಶೋಷಿತ ಸಮುದಾಯಕ್ಕೆ ಸರಿಯಾದ ದಿಕ್ಕು ದೆಸೆ ಸಿಗುವುದು.
ಹಾಗಲ್ಲದಿದ್ದರೆ ಇನ್ನೂ ನೂರು ವರ್ಷ ಅಂಬೇಡ್ಕರ್ ಎಂದರೆ ಹಾಗೆ… ಅಂಬೇಡ್ಕರ್ ಎಂದರೆ ಹೀಗೆ ಎನ್ನುವ ಒಣ ಜಿಜ್ಞಾಸೆ ಮತ್ತು ಚರ್ಚೆಯಲ್ಲೇ ಕಾಲಕಳೆಯಬೇಕಾಗುತ್ತದೆ. “ಅಂಬೇಡ್ಕರ್ ವಿಚಾರವಾಗಿ ಬಹುಜನರೊಳಗೆ ಕವಿದಿರುವ ಮೌಡ್ಯತೆಗಳಿಂದ ಆದಷ್ಟು ಶೀಘ್ರದಲ್ಲಿ ಹೊರಬರಬೇಕಿದೆ.”

ಅಂಬೇಡ್ಕರ್ ಎಂದರೆ, ಆತ್ಮವಿಶ್ವಾಸದ ಆಗರ, ಅವರೊಬ್ಬ ರಾಜನೀತಿಜ್ಞ ಅಷ್ಟೇ ಅಲ್ಲ ಅವರಿಗೆ ತಿಳಿಯದ ವಿಷಯಗಳೇ ಇರಲಿಲ್ಲ. ಅವರು ಶಿಕ್ಷಣ ತಜ್ಞರು, ಅರ್ಥಶಾಸ್ತ್ರಜ್ಞರು, ಕಾನೂನು ತಜ್ಞರು, ಸಮಾಜ ವಿಜ್ಞಾನಿ, ತತ್ವಜ್ಞಾನಿ, ಇತಿಹಾಸಕಾರ, ಮಾನವಶಾಸ್ತ್ರಜ್ಞ, ಆ ಕಾಲದಲ್ಲೇ ಅವರು ಪಡೆದುಕೊಂಡಿದ್ದಂತಹ, ಪದವಿಗಳನ್ನ ಯಾರು ಪಡೆದಿರಲಿಲ್ಲ. ಜಗತ್ತಿನ ಐವರು ಮಹಾನ್ ಜ್ಞಾನಿಗಳಲ್ಲಿ ಅಂಬೇಡ್ಕರ್ ಒಬ್ಬರು. . . ಇತ್ಯಾದಿಯಾಗಿ ಅಂಬೇಡ್ಕರ್ರವರನ್ನು ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ನಾವು ಅಂಬೇಡ್ಕರರ ಅನುಯಾಯಿಗಳು ಎಂದು ಜಂಬ ಕೊಚ್ಚಿಕೊಳ್ಳುತ್ತೇವೆ. ನಿಜ ಅಂಬೇಡ್ಕರ್ ಮಹಾಚೇತನ.
ಅವರನ್ನು ಪಡೆದಬಹುಜನರೇ ಧನ್ಯರು. ಆದರೆ ಬಹುಜನರನ್ನು ಪಡೆದ ಅಂಬೇಡ್ಕರರು ಧನ್ಯರಾಗಿರುವರೆ?
ಅಂತಹ ಧನ್ಯತಾಭಾವ, ಆತ್ಮ ತೃಪ್ತಿ ಅಂಬೇಡ್ಕರರಿಗೆ ಬದುಕಿದ್ದಾಗ ಸಿಕ್ಕಿದ್ದರೆ ಸಂಕಟದಿಂದ ಪ್ರಾಣ ಬಿಡುತ್ತಿದ್ದರಾ? ಅಂಬೇಡ್ಕರವರ ಗತ್ತು, ಗೈರತ್ತು, ನಡೆ ನುಡಿ, ಅವರು ಈ ಸಮುದಾಯದ ಮೇಲೆ ಅಪನಂಬಿಕೆ ಇಡುತ್ತಿದ್ದರಾ? ಅಳುತ್ತಾ, ಮಾತು- ಮೌನ, ಆಚಾರ- ವಿಚಾರ ಪ್ರತಿಯೊಂದೂ ಒಂದೊಂದು ಸಂದೇಶ ನೀಡುತ್ತವೆ. ಎಲ್ಲವನ್ನೂ ಖಡಕ್ಕಾಗಿ ಬದುಕಿ ಸಾಧಿಸಿ ತೋರಿಸಿದ ಪ್ರವಾದಿ ಅವರು ಬುದ್ಧ, ಬಸವ, ಪುಲೆ, ಕಬೀರ ಈ ಎಲ್ಲರನ್ನೂ ಆವಿರ್ಭವಿಸಿಕೊಂಡು ಜನ್ಮ ತಳೆದವರು ಅವರು. ಅಂಬೇಡ್ಕರ್ ಎನ್ನುವ ದೇಹದೊಳಗೆ ನಮ್ಮ ನಡುವೆ ಓಡಾಡಿದ ಮಹಾಚೇತನ ಅವರು.
“ಅವರಿಗಿಂತಲೂ ಸ್ಪೂರ್ತಿ ಇನ್ನಾರು ಬೇಕು? ಅವರ ಹಾದಿಯಲ್ಲಿ ನಡೆಯು ತಿದ್ದೇವೆ ಎಂಬ ಭ್ರಮೆಯಲ್ಲಿ ಕಾಡು ಮೇಡು ಅಲೆಯುತ್ತಿದ್ದೇವಲ್ಲ ನಾವು ನಿಜವಾಗಿ ಅವರ ಅನುಯಾಯಿಗಳಾ? ಅವರು ತೋರಿದ ‘ರಾಜಮಾರ್ಗ’ದಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಈ ಬಹುಜನ ಸಮಾಜ ಅಶೋಕ ಸಾಮ್ರಾಜ್ಯ ನಿಮ್ಮಿಸಿರು ತ್ತಿತ್ತು. ಅವರನ್ನು ಅನುಸರಿಸಿದ್ದರೆ ಇಡೀ ಬಹುಜನ ಸಮಾಜವೇ ಅಂಬೇಡ್ಕರ್ ಆಗಿ ಬೀಗುತ್ತಿತ್ತು. ಆದರೆ ಇದೇನು ಮಾಡಿಕೊಂಡಿದ್ದೇವೆ ನಾವು? ಬಾಯಲ್ಲಿ ಅಂತಹ ಧೀರನ, ಮಹಾಚೇತನದ ಹೆಸರು ಹೇಳುತ್ತಾ, ವರ್ಷ ಪೂರ್ತಿ ಸ್ಮರಣೆ ಮಾಡುತ್ತಾ ಭಯ ಭಕ್ತಿಯಿಂದ ಪೂಜಿಸುತ್ತಾ, ಬೀದಿಗೆ ಬಿದ್ದಿದ್ದೇವಲ್ಲ! ಹರಕು ಬಟ್ಟೆಯಲ್ಲಿ…. ಹಸಿದ ಹೊಟ್ಟೆಯಲ್ಲಿ… ಮುರಿದ ಮನೆಯಲ್ಲಿ …. ಖಾಲಿ ಕೈಯಲ್ಲಿ ಆಹಾಕಾರ ಮಾಡುತ್ತಿದ್ದೇವಲ್ಲ!! ಹಾಗಿದ್ದರೆ ನಾವು ಮಾಡಿರುವ ತಪ್ಪೇನು? ನಾವು ಯಾವ ದಾರಿಯಲ್ಲಿ ನಡೆಯಬೇಕಿತ್ತು? ಯಾವುದಕ್ಕಾಗಿ ನಾವು ಪಣತೊಡಬೇಕಿತ್ತು? ಯಾರು ನಮಗೆ ದಾರಿದೀಪವಾಗಿರಬೇಕಿತ್ತು? ನಮ್ಮ ವಿಮೋಚನೆ ಮಾರ್ಗ ಯಾವುದಾಗಿತ್ತು. ಬಾಬಾಸಾಹೇಬರು ಎಳೆದು ತಂದ ವಿಮೋಚನಾ ರಥದ ಕಥೆ ಏನಾಯ್ತು?

ಈ ಪ್ರಶ್ನೆಗಳೆಲ್ಲವನ್ನು ನಿಮಗೇ ಬಿಡುತ್ತೇನೆ. ಯೋಚನೆ ಮಾಡಿ. ಉತ್ತರ ಹುಡುಕುವುದು ಕಷ್ಟವಾಗಲಾರದು. ಪ್ರಜ್ಞಾವಂತರಾಗಿದ್ದರೆ… ಜಾಗೃತಾವಸ್ಥೆಯಲ್ಲಿದ್ದರೆ ಖಂಡಿತಾ ಈ ಪ್ರಶ್ನೆಗಳಿಗೆ ಉತ್ತರ ಹೊಳೆಯುತ್ತದೆ. ಉತ್ತರ ದೊರೆತಷ್ಟು, ಬೇಗ ನಾವು ಎತ್ತರಕ್ಕೆ ಬೆಳೆಯುತ್ತೇವೆ ಎಂಬುದಂತು ಖಚಿತ. ಇನ್ನಾದರೂ ನಾವು ತುಂಬ ಗಂಭೀರವಾಗಿ ಆಲೋಚನೆ ಮಾಡಿ ಸರಿಯಾದ ಹೆಜ್ಜೆ ಇಡಬೇಕಾಗಿದೆ. ಅಂಬೇಡ್ಕರ್ ರವರ ಜನ್ಮ ದಿನಾಚರಣೆಗಳ ಮೆರವಣಿಗೆಗಳಿಗಿಂತ ಅವರ ಬರಣಿಗೆಗಳು ನಮ್ಮಲ್ಲರ ಕಣ್ಣು ತೆರೆಸಲಿ.
ಬರಹ : ಕಾರ್ತಿಕ್ ಸೀನಾ,
ತೋಳೂರು ಗುಡ್ಡ ಗ್ರಾಮ,
ಚಿಕ್ಕಮಗಳೂರು ತಾ/ ಜಿಲ್ಲೆ.
