ಮೂಡಿಗೆರೆ, ನ. 21: ಬೇಲೂರು ಅರಣ್ಯ ವಲಯ ವ್ಯಾಪ್ತಿಯ ಕಾನನಹಳ್ಳಿ ಕಾಡು, ನೆರಳಮಕ್ಕಿ ಹಾಗೂ ಸೂಳೆಗುಡ್ಡ ಎಸ್ಟೇಟ್ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ತೋಟದ ಕಾರ್ಮಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮೂಡಿಗೆರೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಕಾಡಾನೆಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಸಿಲ್ವರ್ ಖಾನ್ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ, ಪೋಡಿಯ ಕಾಲೋನಿ, ಹೊಸಪುರ, ಬಾಸುರ ದಿಣ್ಣೆಕೆರೆ ಹಾಗೂ ಹಿರೇಶಿಗರ ಗ್ರಾಮಗಳ ಸುತ್ತಮುತ್ತಲಿನ ನಿವಾಸಿಗಳು ಮತ್ತು ಕಾರ್ಮಿಕರು ಜಾಗರೂಕರಾಗಿರಬೇಕು ಎಂದು ಇಲಾಖೆ ಸೂಚಿಸಿದೆ.

ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಚಲನವಲನ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆಗೆ ಮಾಹಿತಿ ನೀಡಬೇಕು. ಇದಕ್ಕಾಗಿ 7204004261 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಂಚಿನ ಪ್ರದೇಶಗಳಲ್ಲಿ ಅನಗತ್ಯವಾಗಿ ಸಂಚರಿಸದೆ, ಕಾಡಾನೆಗಳು ಎದುರಾದ ಸಂದರ್ಭದಲ್ಲಿ ಅವುಗಳ ಸಮೀಪ ಹೋಗುವುದು, ಅವುಗಳನ್ನು ಕೆಣಕುವುದು ಅಥವಾ ಫೋಟೋ ಹಾಗೂ ವಿಡಿಯೋ ತೆಗೆಯಲು ಪ್ರಯತ್ನಿಸುವುದನ್ನು ಮಾಡಬಾರದು. ಸಾರ್ವಜನಿಕರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಹಿತಿ: ಅರಣ್ಯ ಇಲಾಖೆ, ಮೂಡಿಗೆರೆ

ದಿನಾಂಕ: 21-11-2026 | ಸಮಯ: ಬೆಳಿಗ್ಗೆ 9:15.