ಮೂಡಿಗೆರೆ, ನವೆಂಬರ್ 21: ಬೇಲೂರು ಅರಣ್ಯ ವಲಯದ ಕಾನನಹಳ್ಳಿ ಕಾಡು, ನೆರಳಮಕ್ಕಿ ಹಾಗೂ ಸೂಳೆಗುಡ್ಡ ಎಸ್ಟೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೂಡಿಗೆರೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ ಚಿಕ್ಕಮಗಳೂರು ವತಿಯಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಕಾಡಾನೆಗಳು ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಪೋಡಿಯಾ ಕಾಲೋನಿ, ಹೊಸಪುರ, ಗೋಣಿಬೀಡು ಮಕ್ಕಿ, ವಾಲೆಕರಟ್ಟಿ, ಆನೆದಿಬ್ಬ, ಸಾಲುಮರ, ಕಸ್ಕೇಬೈಲ್, ಕಲ್ಲುಗುಡ್ಡ, ಕಮ್ಮರಗೋಡು, ಗಾಡಿಚೌಕ, ಶುಭನಗರ, ಮಣ್ಣಿಕೆರೆ, ಚಂದ್ರಾಪುರ, ವಾಟೆಹಳ್ಳಿ, ಕಲ್ಲಗಂಡಿ, ಗೌತಹಳ್ಳಿ, ಪುರ, ಚಟ್ಟನಹಳ್ಳಿ, ಸಂಗಮಪುರ, ಕನ್ನಾಪುರ, ಮಾಲಹಳ್ಳಿ, ಕಾರಬೈಲ್, ಬೊಮ್ಮನಹಳ್ಳಿ, ಮಾಕೋನಹಳ್ಳಿ, ಮೂಡಸಸಿ, ಘಟ್ಟದಹಳ್ಳಿ, ಕುನ್ನಹಳ್ಳಿ, ಬಾರದಹಳ್ಳಿ, ದುಂಡುಗ, ಇಂದ್ರವಳ್ಳಿ, ನಂದಿಪುರ, ಕಡೆಮಾಡ್ಕಲ್, ಸಿದ್ಧಾರ್ಥವನ, ಹಳ್ಳದಗಂಡಿ, ಹೆಸಗಲ್ ಹಾಗೂ ತತ್ಕೊಳ ಭಾಗಗಳಲ್ಲಿ ಸಂಚರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆಯಾ ಭಾಗದ ಗ್ರಾಮಸ್ಥರು, ತೋಟದ ಮಾಲೀಕರು, ಕೂಲಿ ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಕಾಡಾನೆಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಅವುಗಳ ಹತ್ತಿರ ಹೋಗುವುದು, ಅವುಗಳನ್ನು ಕೆಣಕುವುದು ಅಥವಾ ಫೋಟೋ ಹಾಗೂ ವಿಡಿಯೋ ತೆಗೆಯಲು ಪ್ರಯತ್ನಿಸುವುದನ್ನು ಮಾಡಬಾರದು. ಅರಣ್ಯ ಇಲಾಖೆ ನೀಡುವ ಮುನ್ನೆಚ್ಚರಿಕೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ.

ತಮ್ಮ ಗ್ರಾಮ ಅಥವಾ ತೋಟದ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆನೆ ಕಾರ್ಯಪಡೆಯ ಸಹಾಯವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ ಸಾರ್ವಜನಿಕರಲ್ಲಿ ಕೋರಿವೆ.

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆ ವಹಿಸಿ, ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಮಾಹಿತಿ: ಅರಣ್ಯ ಇಲಾಖೆ ಮೂಡಿಗೆರೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು.

ದಿನಾಂಕ: 21-11-2026 | ಸಮಯ: ಮಧ್ಯಾಹ್ನ 1:05 ಗಂಟೆ.