ಮಂಗಳೂರು, ಸೆ.21:ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವುದರ ಜೊತೆಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ಅಭಿವೃದ್ಧಿಗೆ ₹32,611 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಆದರೆ ತುಳು ಮಾತನಾಡುವ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಐದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಆದಿದ್ರಾವಿಡ ಸಮುದಾಯದ ಬದುಕಿನಲ್ಲಿ ಬದಲಾವಣೆ ತರಬಲ್ಲ ಯಾವುದೇ ನಿರ್ದಿಷ್ಟ ಯೋಜನೆ ಅಥವಾ ಅನುದಾನವನ್ನು ಸಚಿವ ಸಂಪುಟ ಸಭೆಯಲ್ಲಿ ಘೋಷಿಸದಿರುವುದು ತೀವ್ರ ವಿಷಾದನೀಯ ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ತಿಳಿಸಿದ್ದಾರೆ.
ಸರ್ಕಾರವು ಸಮುದಾಯದ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದಿರುವುದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ. ಮಂಗಳೂರಿನಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಆದಿದ್ರಾವಿಡ ಸಮುದಾಯದ ಪ್ರಮುಖ ಹಕ್ಕೊತ್ತಾಯಗಳ ಕುರಿತು ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ಮುಂಚಿತವಾಗಿ ಒತ್ತಾಯಿಸಲಾಗಿತ್ತು. ಆದರೆ ಯಾವುದೇ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರಕ್ಕೆ ₹10 ಕೋಟಿ ಅನುದಾನಕ್ಕೆ ಒತ್ತಾಯ
ಆದಿದ್ರಾವಿಡ ಸಮುದಾಯದ ಆರಾಧ್ಯ ಕುಲದೈವಗಳಾದ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಮೂಡುಬಿದಿರೆ ತಾಲೂಕಿನ ಮಿಜಾರು ಗ್ರಾಮದ ಅಲೇರಿಯಲ್ಲಿದ್ದು, ಇದರ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ಈ ಮೂಲಕ್ಷೇತ್ರದ ಜೀರ್ಣೋದ್ಧಾರಕ್ಕೆ ₹10 ಕೋಟಿ ಅನುದಾನ ನೀಡುವುದಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿತ್ತು ಎಂದು ಸಂಘ ತಿಳಿಸಿದೆ.
ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ವರ್ಷಗಳಾದರೂ ಇದುವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಕಳೆದ ಮೂರುವರೆ ವರ್ಷಗಳಿಂದ ಸಮುದಾಯದ ಪ್ರಮುಖರು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತಿದ್ದರೂ, ಭರವಸೆ ಹೊರತುಪಡಿಸಿ ಯಾವುದೇ ಕ್ರಮವಾಗಿಲ್ಲ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
‘ಸಾರಮಾನಿ’ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಪ್ರತ್ಯೇಕ ಗುರುತಿಗೆ ಆಗ್ರಹ
ತುಳು ಭಾಷಿಕ ಆದಿದ್ರಾವಿಡ ಸಮುದಾಯಕ್ಕೆ ನಿರ್ದಿಷ್ಟ ಉಪಜಾತಿ ಗುರುತಿನ ಸಮಸ್ಯೆಯಿರುವುದರಿಂದ ಒಳ ಮೀಸಲಾತಿ ಜಾರಿ ಪ್ರಕ್ರಿಯೆಯಲ್ಲಿ ಸಮುದಾಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಂಘ ಹೇಳಿದೆ.
ಆದ್ದರಿಂದ ಸರ್ಕಾರಿ ಮೀಸಲಾತಿ ಸೌಲಭ್ಯಗಳಲ್ಲಿ ಸೂಕ್ತವಾಗಿ ಒಳಗೊಳ್ಳಲು ಆದಿದ್ರಾವಿಡ ಸಮುದಾಯವನ್ನು ‘ಸಾರಮಾನಿ’ಹೆಸರಿನಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಗುರುತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ಇದಕ್ಕಾಗಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಿಸಿ ಮನ್ನಾ ಭೂಮಿ ಹಂಚಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂಬ ಬೇಡಿಕೆಯನ್ನೂ ಸರ್ಕಾರದ ಮುಂದಿಡಲಾಗಿದೆ.
ಎರಡು ವಾರಗಳಲ್ಲಿ ಬೇಡಿಕೆ ಈಡೇರಿಸಲು ಆಗ್ರಹ..
ಸಚಿವ ಸಂಪುಟ ಸಭೆಯಲ್ಲಿ ಸಮುದಾಯದ ಬೇಡಿಕೆಗಳ ಕುರಿತು ಯಾವುದೇ ಘೋಷಣೆ ಹೊರಬಾರದ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಸಂಘ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮುದಾಯದ ರಾಜ್ಯ ನಾಯಕರನ್ನು ಕರೆಸಿ ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ನೀಡಿರುವ ಭರವಸೆಯಂತೆ ಎರಡು ವಾರಗಳೊಳಗೆ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ.
ಬೇಡಿಕೆಗಳು ಈಡೇರದಿದ್ದರೆ ಎರಡು ವಾರಗಳ ಗಡುವು ಮುಗಿದ ನಂತರ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.
ಸಚಿವ ಯು.ಟಿ. ಖಾದರ್ ರಾಜೀನಾಮೆಗೆ ಆಗ್ರಹ
ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸುವ ಕುರಿತು ಬಂಟ್ವಾಳದಲ್ಲಿ ನಡೆದ ಸಂಘದ ಜಿಲ್ಲಾ ಘಟಕದ ತುರ್ತು ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ ಎಂದು ಸಂಘ ತಿಳಿಸಿದೆ.
ಸಮುದಾಯದ ಹಿತಕ್ಕಾಗಿ ತಮ್ಮ ಹುದ್ದೆ ಹಾಗೂ ಪಕ್ಷದ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿರುವ ಶೇಖರ್ ಕುಕ್ಕೇಡಿ ಮತ್ತು ಯತೀಶ್ ಧರ್ಮಸ್ಥಳ ಅವರ ನಿರ್ಧಾರವನ್ನು ಸಂಘದ ಜಿಲ್ಲಾ ಘಟಕ ಸ್ವಾಗತಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಾಯಕರು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ಮಾಹಿತಿಯೂ ಇದೆ ಎಂದು ಸಂಘ ಹೇಳಿದೆ.
‘ಸಮುದಾಯದ ಹಕ್ಕುಗಳಿಗಾಗಿ ಸಂಘಟಿತ ಹೋರಾಟ’
ರಾಜ್ಯದ ಆರು ಜಿಲ್ಲೆಗಳ 27 ತಾಲೂಕುಗಳ 24 ವಿಧಾನಸಭಾ ಕ್ಷೇತ್ರಗಳಲ್ಲಿ ಆದಿದ್ರಾವಿಡ ಸಮುದಾಯದ ಐದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಪೈಕಿ ಆದಿದ್ರಾವಿಡ ಸಮುದಾಯದ ಜನಸಂಖ್ಯೆ ಗಣನೀಯವಾಗಿದ್ದರೂ ಸರ್ಕಾರದಿಂದ ಸೂಕ್ತ ಗಮನ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಸಮುದಾಯವನ್ನು ಇದೇ ರೀತಿಯಾಗಿ ನಿರ್ಲಕ್ಷಿಸುತ್ತಾ ಹೋದರೆ, ಆದಿದ್ರಾವಿಡ ಸಮುದಾಯವು ಸಂಘಟಿತವಾಗಿ ತನ್ನ ಹಕ್ಕುಗಳಿಗಾಗಿ ದಿಟ್ಟ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ” ಎಂದು ಸಂಘ ಎಚ್ಚರಿಕೆ ನೀಡಿದೆ.
ಸರ್ಕಾರವು ಮುಖ್ಯಮಂತ್ರಿಗಳು ನೀಡಿರುವ ಎರಡು ವಾರಗಳ ಗಡುವಿನೊಳಗೆ ಸಮುದಾಯದ ಬೇಡಿಕೆಗಳನ್ನು ಈಡೇರಿಸಿ, ಪ್ರತಿಭಟನೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು.ಎಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.
ಉಪಸ್ಥಿತರಿದ್ದವರು
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ, ಮಿಜಾರು, ಮೂಡುಬಿದಿರೆ ಅಧ್ಯಕ್ಷ ಶಿವರಾಜ್ ಪಿ.ಬಿ. ಪ್ರಧಾನ ಕಾರ್ಯದರ್ಶಿ ಅನಿಲ್ ಕಂಕನಾಡಿ ರಾಜ್ಯ ಸಂಘದ ಜೊತೆ ಕಾರ್ಯದರ್ಶಿ ಸುರೇಶ್ ಪಿ.ಬಿ. ಬಂಟ್ವಾಳ ತಾಲೂಕು ಘಟಕದ ಗೌರವಾಧ್ಯಕ್ಷ ಸಂತೋಷ ಭಂಡಾರಿಬೆಟ್ಟು ಪ್ರಧಾನ ಕಾರ್ಯದರ್ಶಿ ಪ್ರೀತಿರಾಜ್ ದ್ರಾವಿಡ್ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಗೌರವಾಧ್ಯಕ್ಷ,ಶ್ರೀನಿವಾಸ್ ಪುಚ್ಚೆಮೊಗರು ಉಪಸ್ಥಿತರಿದ್ದರು.