ಮೂಡಿಗೆರೆ, ಸೆಪ್ಟೆಂಬರ್ 24:
ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ದೇವಿರಮ್ಮ ದೇವಸ್ಥಾನದ ಸಮೀಪದಲ್ಲಿರುವ ಗಿರಿರಾಜ್ ಗೌಡ ಅವರ ಕಾಡಿನಲ್ಲಿ ಎರಡು ಕಾಡಾನೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ಕಾಡಾನೆಗಳ ಸಂಚಾರದ ಹಿನ್ನೆಲೆಯಲ್ಲಿ ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಸಿಲ್ವರ್ ಖಾನ್ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ, ಪೋಡಿಯ ಕಾಲೋನಿ, ದಿಣ್ಣೆಕೆರೆ ಹಾಗೂ ಕೆಮ್ಮಣ್ಣುಗಂಡಿ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ವಿಶೇಷವಾಗಿ ಕಾಡಾನೆಗಳು ಸಂಚರಿಸುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚಾರ ಹಾಗೂ ಅನಗತ್ಯವಾಗಿ ಕಾಡು ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸುವಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಯಾವುದೇ ಸ್ಥಳದಲ್ಲಿ ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ಕಾಡಾನೆಗಳ ಚಲನೆಯನ್ನು ಕೆಣಕದೆ ಕೂಡಲೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ತಿಳಿಸಿದೆ.

ಅರಣ್ಯ ಇಲಾಖೆ ಮೂಡಿಗೆರೆ ಪ್ರಕಟಣೆ
ದಿನಾಂಕ: 24-09-2026 | ಸಮಯ: ಬೆಳಿಗ್ಗೆ 8:40.