ಮೂಡಿಗೆರೆ, ನವೆಂಬರ್ 14:
ಚಿಕ್ಕಮಗಳೂರು ಜಿಲ್ಲೆಯ ನೆರಡಿ ಗ್ರಾಮದ ಕಲ್ಲೇಗೌಡರು ಹಾಗೂ ಪೂರ್ಣೇಶ್ ಅವರ ತೋಟದ ಸುತ್ತಮುತ್ತ ಒಂಟಿ ಕಾಡಾನೆಯೊಂದು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನೆರಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ತೋಟದ ಕಾರ್ಮಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮೂಡಿಗೆರೆ ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ನೆರಡಿ, ಕೆಳಗಣೆ, ಕಟ್ಟೆಹೊಳೆ, ತಿರುಗುಣ ಹಾಗೂ ಹಲಸುಮನೆ ಗ್ರಾಮಗಳ ಸುತ್ತಮುತ್ತ ಕಾಡಾನೆಯ ಸಂಚಾರ ಇರುವ ಸಾಧ್ಯತೆಯಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ಈ ಗ್ರಾಮಗಳ ವ್ಯಾಪ್ತಿಯ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಅರಣ್ಯ ಇಲಾಖೆಯಿಂದ ಸೂಕ್ತ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಪಡೆದುಕೊಂಡ ನಂತರವೇ ಕೆಲಸಕ್ಕೆ ತೆರಳುವಂತೆ ಸೂಚಿಸಲಾಗಿದೆ.

ತೋಟಗಳಲ್ಲಿ ಹಾಗೂ ಗ್ರಾಮಗಳ ಸುತ್ತಮುತ್ತ ಕಾಡಾನೆ ಕಾಣಿಸಿಕೊಂಡಲ್ಲಿ ಸಾರ್ವಜನಿಕರು ಅದರ ಸಮೀಪ ಹೋಗದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕಾಡಾನೆಯನ್ನು ಕೆಣಕುವುದು, ಹತ್ತಿರದಿಂದ ಫೋಟೋ ಅಥವಾ ವಿಡಿಯೋ ತೆಗೆಯಲು ಪ್ರಯತ್ನಿಸುವುದು ಅಪಾಯಕಾರಿ ಎಂದು ಸಾರ್ವಜನಿಕರು ಗಮನಿಸಬೇಕು.

ತುರ್ತು ಸಂಪರ್ಕಕ್ಕೆ ಮನವಿ:

ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ, ಚಿಕ್ಕಮಗಳೂರು ಇವರ ಸಹಾಯವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಪ್ರಕಟಣೆ: ಅರಣ್ಯ ಇಲಾಖೆ, ಮೂಡಿಗೆರೆ
ದಿನಾಂಕ: 14-11-2026
ಸಮಯ: ಮಧ್ಯಾಹ್ನ 1:41.