ಆಫ್ರಿಕಾ ಖಂಡವು ಪ್ರಪಂಚದ ಎರಡನೆಯ ದೊಡ್ಡ ಖಂಡವಾಗಿದೆ. ಆಫ್ರಿಕಾ ಖಂಡವು ಸುಮಾರು 30,33, 5000 ಚದರ ಕಿಲೋ ಮೀಟರ್ ವಿಸ್ತಾರವಾಗಿದೆ. ಆಫ್ರಿಕಾಖಂಡ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದಲ್ಲಿ ಹಂಚಿಕೆಯಾಗಿದೆ. ಆಫ್ರಿಕಾ ಖಂಡದಲ್ಲಿ ಪ್ರಪಂಚದ ಅತಿ ದೊಡ್ಡದಾದ ಸಹಾರ ಮರುಭೂಮಿ ನೆಲೆಸಿದೆ. ಎತ್ತರವಾದ ಶಿಖರ ಮೌಂಟ್ ಕಿಲಿಮಂಜಾರೋ ಇದು ಆಫ್ರಿಕಾ ಖಂಡದಲ್ಲಿದೆ.  ಜಗತ್ತಿನ ಅತಿ ಉದ್ದವಾದ ನದಿ ನೈಲ್ ನದಿ ಆಫ್ರಿಕಾ ಖಂಡದಲ್ಲಿ ಹರಿಯುತ್ತದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಚಿನ್ನ ಮತ್ತು ವಜ್ರವು ಉತ್ಪಾದಿಸುವ  ಖಂಡವಾಗಿದೆ. ವಿಕ್ಟೋರಿಯಾ ಜಲಪಾತದ ಸುತ್ತಮುತ್ತ ವೈವಿಧ್ಯಮಯವಾದ ಪ್ರಾಣಿ ಮತ್ತು ಸಸ್ಯಗಳು ಕಂಡುಬಂದಿದ್ದು, ಇದೊಂದು ಜೀವವೈವಿಧ್ಯತೆಯ ತಾಣವಾಗಿದೆ. ಇಂತಹ ಸುಂದರ ಪರಿಸರವು ಜಗತ್ತಿನ ಯಾವುದೇ ಖಂಡದಲ್ಲಿ ಕಂಡುಬರುವುದಿಲ್ಲ. ಆಫ್ರಿಕಾಖಂಡದಲ್ಲಿ ಆದಿಮಾನವ ಪ್ರಭೇದಗಳಾದ ಹೋಮೋ ಎಲೆಕ್ಷಸ್ .ಹೋಮೋ ಅಬಿಲಿಸ್, ನಂತಹ ಪ್ರಭೇದಗಳು 2 ಲಕ್ಷಗಳ ಹಿಂದೆಯೇ ಇಥಿಯೋಪಿಯಾದಲ್ಲಿ ಕಂಡುಬಂದಿವೆ. ಆದುದ್ದರಿಂದಲೇ ಆಫ್ರಿಕಾ ಖಂಡವನ್ನು ಪ್ರಾಚ್ಯ  ಶಾಸ್ತ್ರಜ್ಞರು ಅತಿ ಪ್ರಾಚೀನ ಮೂಲ ನಿವಾಸವೆಂದು ಗುರುತಿಸಿದ್ದಾರೆ. ಪ್ರಾಕೃತಿಕವಾಗಿ ಸೌಂದರ್ಯವಾಗಿರುವ ಖಂಡವಾದರೂ ಆಫ್ರಿಕಾ ಖಂಡ ಗುಲಾಮಗಿರಿಯ ಕೇಂದ್ರವಾಗಿತ್ತು.  ಬ್ರಿಟಿಷರ ಕಾಲದಲ್ಲಿ ಆಫ್ರಿಕಾ ಖಂಡದ ಮೂಲ ನಿವಾಸಿಗಳನ್ನು ಪ್ರಾಣಿಗಳಂತೆ  ಮಾರಾಟ ಮಾಡುತ್ತಿದ್ದರು.  ಪ್ರಾಕೃತಿಕವಾಗಿ ಸೌಂದರ್ಯ ವಾಗಿದ್ದರು ಆಫ್ರಿಕಾ ಖಂಡದ ಅನೇಕ ರಾಷ್ಟ್ರಗಳು ಬಡ ರಾಷ್ಟ್ರಗಳ ಪಟ್ಟಿಗೆ ಸೇರಿದ್ದು, ಈ ರಾಷ್ಟ್ರಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತಿ ಕಡಿಮೆ ಇದೆ. ವಿಶ್ವಸಂಸ್ಥೆಯ 193ನೇ ಸದಸ್ಯ ದೇಶವಾಗಿ ಆಫ್ರಿಕಾ ಖಂಡದ ದಕ್ಷಿಣ ಸುಡಾನ್ ದೇಶವು ಅತ್ಯಂತ ಹಿಂದುಳಿದ ದೇಶವಾಗಿದೆ. ಪ್ರಾಕೃತಿಕವಾಗಿ ಸೌಂದರ್ಯವಾಗಿದ್ದರು ಜಗತ್ತಿನ ಆರ್ಥಿಕತೆಯಲ್ಲಿ ಹಿಂದುಳಿದಿದೆ  ಶೈಕ್ಷಾಣಿಕ ಕ್ಷೇತ್ರದಲ್ಲಿ ಇನ್ನು ಪ್ರಗತಿಯನ್ನೇ ಸಾಧಿಸಿಲ್ಲ.  ಬುಡಕಟ್ಟು ಆದಿವಾಸಿಗಳು ಕಾರ್ಮಿಕರು ಹೆಚ್ಚಾಗಿರುವ ಕಾರಣ  ಆಫ್ರಿಕಾ ಖಂಡವನ್ನು ಕಗ್ಗತ್ತಲೆಯ ಖಂಡ ಎಂದು ಕರೆಯುತ್ತಾರೆ. ಆದರೂ ಪ್ರಪಂಚದಲ್ಲಿ ಚಿನ್ನ ವಜ್ರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಅಂತೆಯೇ,……………. ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸ್ಥಾನ ವಿಶಿಷ್ಟವಾದುದ್ದು ಜಿಲ್ಲೆಯ ಬಹುಪಾಲು ದಟ್ಟ ಅರಣ್ಯ ಗಳಿಂದ ಹಾಗೂ ಬೆಟ್ಟ ಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶವಾಗಿದೆ. ಈ ಜಿಲ್ಲೆ 12.54 ಮತ್ತು 13.54 ಡಿಗ್ರಿಗಳ ಉತ್ತರ ಅಕ್ಷಾಂಶದಿಂದ 75.7 ಡಿಗ್ರಿ ಮತ್ತು 76.22 ಡಿಗ್ರಿಗಳ ಪೂರ್ವ ರೇಖಾಂಶಗಳ ಮಧ್ಯದಲ್ಲಿರುವ ಜಿಲ್ಲೆಯಾಗಿದೆ. ಈ ಜಿಲ್ಲೆಯು ಭೌಗೋಳಿಕ ವಿಸ್ತೀರ್ಣ 7199 ಚದರ ಕಿಲೋ ಮೀಟರ್ ಗಳು  ರಾಜ್ಯದ ವಿಸ್ತೀರ್ಣದಲ್ಲಿ 15ನೇ ಸ್ಥಾನದಲ್ಲಿದೆ. ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರ್ ಗೆ 130. ಈ ಜಿಲ್ಲೆಯಲ್ಲಿ ಒಂಬತ್ತು ತಾಲ್ಲೂಕುಗಳನ್ನು ಕಾಣಬಹುದು….. ಪ್ರಾಕೃತಿಕವಾಗಿ ಸೌಂದರ್ಯ ವಾಗಿ ಕಾಣುವ ಜಿಲ್ಲೆಯನ್ನು ಅನೇಕ ಕವಿಗಳು, ಸಾಹಿತಿಗಳು, ಪ್ರವಾಸಿಗರು ಹಾಡಿ ಹೊಗಳಿದ್ದಾರೆ. ಚಿಕ್ಕಮಗಳೂರು ಎಂದರೆ ಹಚ್ಚ ಹಸಿರಿನ  ತಂಪು, ನೂರಾರು ಜಾತಿಯ ತಂಪಾದ ಮರ, ಗಿಡ ಬಳ್ಳಿಗಳು ಪ್ರಪಂಚದಲ್ಲಿ ಹೆಸರುವಾಸಿಯಾಗಿರುವ ನಾನಾ ಬಗೆಯ ಪ್ರಾಣಿ ಪಕ್ಷಿಗಳು ಮೈತುಂಬಿ ಹರಿಯುವ ನದಿ, ಹಳ್ಳ ಮಲೆನಾಡು ನೋಡುಗರ ಮನ ಪುಳಕ ಗೊಳ್ಳುವಂತೆ ಧುಮುಕುವ ಜರಿಗಳು, ಬಾಗಿ ಬಳುಕುವ ಗದ್ದೆಗಳು, ಹಸಿರು ಪೈರಿನ ಗದ್ದೆಗಳು, ದಟ್ಟ ಕಾಡುಗಳು, ಸುಂದರ ಕಾಫಿ ತೋಟಗಳು, ತಣ್ಣನೆ ಬೀಸುವ ಗಾಳಿ ಅನೇಕ ಜಾತಿಯ ಪ್ರಾಣಿ ಪಕ್ಷಿಗಳು, ನೂರಾರು ಬಗೆಯ ಸಸ್ಯ ಸಂಪತ್ತು ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣಗಳು ದೇಶದ ಗಮನ ಸೆಳೆಯುವಂತಹ “ಬಾಬಾ ಬುಡನ್ ಗಿರಿ” ಇಷ್ಟೆಲ್ಲಾ ಪ್ರಾಕೃತಿಕ ಸಂಪತ್ತಾಗಿರುವ ಜಿಲ್ಲೆಯಾಗಿದ್ದರು ಇದರೊಳಗೆ ಮರ್ಮವೇ ಬೇರೆಯಾಗಿದೆ. ಚಿಕ್ಕಮಗಳೂರೆಂದರೆ ಹಾಗೆ, ಹೀಗೆ ಎಂದು ನಮಗೆ ನಾವೇ ಕಲ್ಪಿಸಿಕೊಂಡು ವಿವರಿಸಿಕೊಂಡು ಖುಷಿಪಡಬಹುದು. ರೋಮಾಂಚನಗೊಳ್ಳಬಹುದು ಕಲ್ಪನಾ ಲೋಕದಲ್ಲಿ ತೇಲಬಹುದು. ಆದರೆ ಚಿಕ್ಕಮಗಳೂರು ಜಿಲ್ಲೆ ಹೊರಗೆ ಸುಂದರವಾಗಿ ಕಂಡರು ಅದರ ಒಳಗಿರುವ ಮರ್ಮವೇ ಬೇರೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯು ಭಾರಿ ಭೂಮಾಲೀಕರನ್ನು ಹೊಂದಿರುವ ಜಿಲ್ಲೆಯಾಗಿದೆ. 100 ರಿಂದ 10,000 ಎಕರೆ ಭೂಮಿಯು ಭೂ ಮಾಲೀಕರ ಕೈಯಲ್ಲಿದೆ. ಕಾನೂನು ರಾಜಕಾರಣ ಶಿಕ್ಷಣ ಎಲ್ಲವೂ ಅವರ ಕೈಯಲ್ಲಿರುವಂತೆ ಬಂಡವಾಳಶಾಹಿ ವ್ಯವಸ್ಥೆ, ವ್ಯವಸ್ಥಿತವಾಗಿ ರೂಪಿಸಿದೆ. ಜಿಲ್ಲೆಯ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆ ಬರುವಂತಹ ಕೂಲಿಕಾರ್ಮಿಕ ಮಕ್ಕಳಿಗೆ ಶಿಕ್ಷಣ ಇಲ್ಲ ಬಾಲಕಾರ್ಮಿಕ ಪದ್ಧತಿ ಜಿಲ್ಲೆಯಲ್ಲಿ ಜೀವಂತವಾಗಿದೆ. ಕಾನೂನು ಕಟ್ಟಲೆಗಳಿಗೆ ಜಾಗವೇ ಇಲ್ಲ. ಶಾಸಕ ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ, ನ್ಯಾಯಾಧೀಶರು ಎಲ್ಲರೂ ದುಡಿಯುವ ವರ್ಗಕ್ಕೆ ಭೂಮಾಲೀಕರೇ ಆಗಿದ್ದಾರೆ. ತಮ್ಮ ತೋಟದಲ್ಲಿ ದುಡಿಯುವ ಕಾರ್ಮಿಕರಿಗೆ ಭೂಮಾಲೀಕ ಈ ದಿನ ಸೂರ್ಯ ದಕ್ಷಿಣಾದಲ್ಲಿ ಹುಟ್ಟಿ ಉತ್ತರದಲ್ಲಿ ಮುಳುಗುತ್ತಾನೆ ಎಂದರೆ ಕಾರ್ಮಿಕ  ಒಪ್ಪಿಕೊಳ್ಳಲೇಬೇಕು ಅಂತಹ ಭೀಕರ ಪರಿಸ್ಥಿತಿ.  ಕಾರ್ಮಿಕರದು ಮರು ಮಾತನಾಡಲು ಅವಕಾಶವೇ ಇಲ್ಲ.  ಕಾಫಿ ಉತ್ಪಾದನೆ ಪ್ರಮುಖ ಸಾಧಾನವಾದುದ್ಧರಿಂದ 1991ರ ನಂತರ ಜಾಗತೀಕರಣದ ನೀತಿಗಳ ಭಾಗವಾಗಿ ಕೇಂದ್ರ ಸರ್ಕಾರ ಕಾಫಿ ಬೋರ್ಡಿಗೆ ಕಾಫಿ ಮಾರಾಟಕ್ಕಿದ್ದ ನೂರೆಂಟು ಕಂಡಿಷನ್ ಗಳು ಕ್ಯಾನ್ಸಲ್ ಆದವು. ಬೆಲೆಯು ಕಾಫಿ ಬೆಳೆಗಾರರ ಊಹೆಯನ್ನು ಮೀರಿತು ಎಂದೆಂದೂ ಕಾಣದ ನೋಟುಗಳು ಕಾಫಿ ಬೆಳೆಗಾರರ ಕಣ್ಣು ಕುಕ್ಕಿದವು. ಭತ್ತ ಬೆಳೆಯುವ ಗದ್ದೆಗಳಲ್ಲಿ ಕಾಫಿ,ಎಲಕ್ಕಿ, ಶುಂಠಿ ಕಾಲಿಟ್ಟವು ಕಾಫಿ ಬೆಳೆಯಲು ಬೇಕಾಗುವ ಎಲ್ಲ ಸಲಕರಣೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯು ಒದಗಿಸಲು ಪ್ರಾರಂಭ ಮಾಡಿತು. ಅಂತರಾಷ್ಟ್ರೀಯ ಕಾಫಿ ಸಮಾವೇಶಗಳು ರಾಜ್ಯದಲ್ಲಿ ನಡೆಯಲು ಪ್ರಾರಂಭವಾದವು. ಇತ್ತೀಚಿಗೆ ದಿನಾಂಕ 25.09.2023 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 172 ದೇಶಗಳ ಪ್ರತಿನಿಧಿಗಳು ಭಾಗವಹಿಸಿ ಬೃಹತ್ ಕಾಫಿ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಆ ಸಮಾವೇಶದಲ್ಲಿ ಕಾಫಿ ಬೆಳೆಯನ್ನು ಯಾವ ರೀತಿ ಉತ್ಪಾದನೆ ಮಾಡಬೇಕು ಅದರಿಂದ  ಹೇಗೆ ಹೆಚ್ಚು ಲಾಭಗಳಿಸಬೇಕು. ಎಂಬ ಬಗ್ಗೆ ಚರ್ಚಿಸಿದರೆ ಹೊರತು ಕಾಫಿ ಉತ್ಪಾದನೆ ಮಾಡುವ ಕಾರ್ಮಿಕರ ಬಗ್ಗೆ ಯಾವುದೇ ರೀತಿ ಚರ್ಚೆ ನಡೆದಿರುವುದಿಲ್ಲ. ಕಾಫಿ ಬೆಳೆಯ ಮುಖ್ಯ ಉದ್ದೇಶವೇ ಲಾಭಗಳಿಸುವುದಾಗಿದೆ. ಏಕೆಂದರೆ ಬಂಡವಾಳಶಾಹಿ ಮತ್ತು ಊಳಿಗಮಾನ್ಯ ಷಾಯಿ ವ್ಯವಸ್ಥೆಯ ಒಡಂಬಡಿಕೆ ಯಿಂದಾಗಿ ಮಲೆನಾಡಿನ ಕಾರ್ಮಿಕರು ಶೋಷಣೆಗೆ ಒಳಗಾದರು. ಸಾಮಾಜಿಕ ಶೋಷಣೆ ಮಲೆನಾಡಿನ ಪ್ರತಿ ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿದೆ. ಭೂಮಾಲೀಕರ ತೋಟಗಳಲ್ಲಿ ಉಗ್ರ ರೂಪದಲ್ಲಿ ದೇವತೆಯನ್ನು ಪ್ರತಿಷ್ಠಾಪಿಸಿ ಆ ತೋಟದಲ್ಲಿ ಯಾವುದೇ ವಸ್ತುವನ್ನು ಕಾರ್ಮಿಕರು ತೆಗೆದುಕೊಂಡು ಹೋಗಬಾರದು ತೋಟದಲ್ಲಿ ಬೆಳೆಯುವ ಯಾವುದೇ ಹಣ್ಣು ಹಂಪಲುಗಳನ್ನು ಸಹ ತೆಗೆದುಕೊಂಡು ಹೋಗಬಾರದೆಂಬ ಹಿನ್ನೆಲೆಯಿಂದ ದೇವರ ಹೆಸರಿನಲ್ಲಿ ಭಯವನ್ನು ಹುಟ್ಟಿಸಿದರು. ಮಲೆನಾಡಿನಲ್ಲಿ ನಡೆಯುವ ಸುಗ್ಗಿ ಹಬ್ಬಗಳಲ್ಲಿ ಅಸ್ಪೃಶ್ಯತೆ ಆಚರಣೆ ನಿರಂತರವಾಗಿ ನಡೆಯತೊಡಗಿತು. ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ದಲಿತರನ್ನು ಭೂಮಿಯನ್ನು ಹೊಂದದಂತೆ ನೋಡಿಕೊಳ್ಳಲಾಯಿತು. ಜಿಲ್ಲೆಯ ಕಾಫಿ ತೋಟದಲ್ಲಿ ಕೆಲಸ ಮಾಡುವವರ ಆರೋಗ್ಯದ ಬಗ್ಗೆ ಯಾವುದೇ ಕಾಳಜಿವಹಿಸಿದಂತೆ ದುಡಿಸಿಕೊಳ್ಳಲಾಗುತ್ತಿದೆ. ಕಡಿಮೆ ಸಂಬಳವನ್ನು ಕೊಟ್ಟು ಹೆಚ್ಚು ಕೆಲಸ ಮಾಡಿಕೊಳ್ಳಲಾಗುತ್ತಿದೆ. ಕಾಫಿ ಕುಯ್ಯುವ ಸಂದರ್ಭದಲ್ಲಿ ಬೆಳಗ್ಗೆ 9:00 ರಿಂದ ಸಂಜೆ 5:00 ತನಕ ತೋಟದಲ್ಲಿ ಕೆಲಸ ಮಾಡಬೇಕು. ನಂತರ ಸಂಜೆ 5 ಗಂಟೆಯಿಂದ 07 ಗಂಟೆಗೆ ವರೆಗೆ ಕೊಯ್ಲು ಮಾಡಿದ ಕಾಫಿಯನ್ನು ಪಲ್ಪರ್ ಮಾಡಬೇಕು. ನಂತರ ರಾತ್ರಿ ಇಡೀ ಪಲ್ಪರ್  ಮಾಡಿದ ಕಾಫಿಯನ್ನು ಭೂ ಮಾಲೀಕರ ಕಣದಲ್ಲಿಯೇ ಕಾಯಬೇಕು. ಮತ್ತೆ ಬೆಳಿಗ್ಗೆ 9:00 ಕೆಲಸಕ್ಕೆ ಹೋಗಬೇಕು. ಯಾವುದೇ ರಜೆಯನ್ನು ನೀಡದೆ ಗುಲಾಮರಂತೆ ದುಡಿಸಿ ಕೊಳ್ಳಲಾಗುತ್ತದೆ. ಕಡಿಮೆ ಸಂಬಳ ಕೊಟ್ಟು ದುಡಿಸಿಕೊಳ್ಳಲಾಗುತ್ತದೆ. ಕಷ್ಟಕಾಲದಲ್ಲಿ ಕಾರ್ಮಿಕರಿಗೆ ಸಾಲ ನೀಡಿದರೆ ಬಡ್ಡಿ, ಚಕ್ರ ಬಡ್ಡಿ ಸೇರಿಸಿ ಸಾಯುವವರೆಗೆ ಅವರ ತೋಟದಲ್ಲಿಯೇ ದುಡಿಯುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತದೆ. ಯಾವುದೇ ಕಾರ್ಮಿಕ ಕಾಯ್ದೆಗಳನ್ನು ಪಾಲಿಸದೆ ಆರ್ಥಿಕವಾಗಿ ಶೋಷಣೆ ಮಾಡಲಾಗುತ್ತಿದೆ. ಜಿಲ್ಲೆಯ ಕುದುರೆಮುಖದ  ನಲ್ಲಿಬೀಡು ಮತ್ತು ಗಂಗಡಿ ಕಲ್ಲಿನಲ್ಲಿ ಹುಟ್ಟುವ ತುಂಗಭದ್ರ ನದಿಯ ಪ್ರದೇಶದಲ್ಲಿ ಜಪಾನ್ ಕಂಪನಿಯು ಗಣಿಗಾರಿಕೆಯನ್ನು ನಡೆಸಲು ಚಿಂತನೆ ನಡೆಸಿದ ಸಂದರ್ಭದಲ್ಲಿ ಅನೇಕ ಪರಿಸರ ಹೋರಾಟಗಾರರು ಪ್ರಗತಿಪರರು ಚಿಂತಕರು ಲೇಖಕರು ಗಣಿಗಾರಿಕೆ ವಿರುದ್ಧ ತುಂಗಭದ್ರ ಉಳಿಸಿ ಹೋರಾಟ ವೇದಿಕೆ ರೂಪಿಸಿ  ಹೋರಾಟ ಮಾಡುವ ಸಂದರ್ಭದಲ್ಲಿ ಚಳವಳಿಗಾರರ ಮೇಲೆ “ನಗರ ನಕ್ಸಲ”ರೆಂದು ಬಿಂಬಿಸಿತ್ತು.  ಕೇಂದ್ರ ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಪ್ರಶಸ್ತಿ ಪಡೆದವರಾದ ಗಿರೀಶ್ ಕಾರ್ನಾಡ್, ಯು.ಆರ್ ಅನಂತಮೂರ್ತಿ ಯಂತಹ ಚಿಂತಕರು ಸೇರಿದಂತೆ ಪ್ರೊ ರಾಜೇಂದ್ರ ಚೆನ್ನಿ ಅಂತಹ ವಿಚಾರವಾದಿಗಳ ಮೇಲು ನಗರ ನಕ್ಸಲರೆಂಬ ಹಣೆಪಟ್ಟಿಯನ್ನು ಕಟ್ಟಿ ಪರಿಸರ ಹೋರಾಟದಿಂದ ದೂರ ಇಡುವಂತೆ ಊಳಿಗಮಾನ್ಯ ಷಾಯಿ ಹಾಗೂ  ಬಂಡವಾಳ ಶಾಹಿವ್ಯವಸ್ಥೆ, ವ್ಯವಸ್ಥಿತವಾಗಿ ಚಳವಳಿಯಿಂದ ಹಿಂದೆ ಸರಿಯುವಂತೆ ಮಾಡಲು ತಂತ್ರ ಕುತಂತ್ರ  ರೂಪಿಸಿತು.  ಅನೇಕ ಜನಪರ ಚಿಂತಕರು,   ಜೀವಪರ ಹೋರಾಟಗಾರರ ಮೇಲೆ ಪ್ರಭುತ್ವ ಇಲ್ಲಸಲ್ಲದ ಆಪಾದನೆ ಹೊರಿಸಿ ಮೊಕದ್ದಮೆಯನ್ನು ದಾಖಲಿಸಿದ್ದು ಈ ಜಿಲ್ಲೆಯ ಬಹು ದೊಡ್ಡ ದುರಂತ……….. ಬಹು ಮುಖ್ಯವಾಗಿ ಈ ಜಿಲ್ಲೆಯಲ್ಲಿರುವ ಶ್ರೀಮಂತರು ಅತಿ ಶ್ರೀಮಂತರಾಗಿದ್ದಾರೆ ಬಡವರು ಕಡು ಬಡವರಾಗುತ್ತಿದ್ದಾರೆ. ಕಾಫಿ ತೋಟದ ಲೈನ್ ಮನೆಗಳಲ್ಲಿ ಶ್ರಮಜೀವಿಗಳಾಗಿರುವ  ಇವರ ಸಂಖ್ಯೆ ಸುಮಾರು 5 ಲಕ್ಷಕ್ಕೂ ಅಧಿಕವಾಗುತ್ತಿದೆ. ಕಾಫಿ ಕೀಳುವ ತಿಂಗಳಲ್ಲಿ ಇದಕ್ಕೆ ಸಹಾಯವಾಗುವ 6 ಲಕ್ಷ ದುಡಿಮೆಗಾರರನ್ನು ಕೂಲಿಗೆ ತೆಗೆದುಕೊಳ್ಳಲಾಗುತ್ತದೆ. ಈ ಅಂಗಾಮಿ ಕೂಲಿಕಾರರು ಮುಖ್ಯವಾಗಿ ಕಡು ಬಡವರಾಗಿದ್ದಾರೆ . 90% ದುಡಿದು ತಿನ್ನುವ ಜನ ಗೌರವ ಮರ್ಯಾದೆಗಳಿಲ್ಲದೆ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಭೂ ಮಾಲೀಕರು  ಸಾಕಿದ ತಮ್ಮ ನಾಯಿಗಳಿಗೆ ಹಾಕುವ ಅನ್ನಕ್ಕಿಂತ ಕಡೆಯಾದ ಅನ್ನವನ್ನು ತೋಟ  ಕಾರ್ಮಿಕರು ತಿನ್ನುತ್ತಿದ್ದಾರೆ. ಅವರು ಸಾಕಿದ ನಾಯಿಗಳನ್ನು ಕೂಡಿ ಹಾಕುವ ಗೂಡಿಗಿಂತ ಹೀನಾಯವಾದ  ಸ್ಥಿಥಿಲಗೊಂಡಿರುವ ಮನೆಯಲ್ಲಿ ಕಾರ್ಮಿಕರು ವಾಸವಾಗಿದ್ದಾರೆ. ಭೂಮಾಲೀಕರು ತಮ್ಮ ಕಾರುಗಳನ್ನು ಒರೆಸುವಂತಿರುವ ಬಟ್ಟೆಗಳನ್ನು ಕಾರ್ಮಿಕ ವರ್ಗ ದಿನಂಪ್ರತಿ ಧರಿಸುತ್ತಿದ್ದಾರೆ. ಲೈನ್ ಮನೆಯ ಕಾರ್ಮಿಕರನ್ನು ಆಫ್ರಿಕಾ ಖಂಡದ ಗುಲಾಮರನ್ನು ಅಂದು  ಬೇರೆ ಬೇರೆ ದೇಶಗಳಿಗೆ ಮಾರಾಟ  ಮಾಡಿದಂತೆ ಇಂದು ಜಿಲ್ಲೆಯಲ್ಲಿ ಬೇರೆ ಬೇರೆ  ತೋಟದ ಜಮೀನ್ದಾರರು ಹಣವನ್ನು  ನೀಡಿ ಲೈನ್ ಕಾರ್ಮಿಕರನ್ನು ಖರೀದಿಸುತ್ತಿದ್ದಾರೆ. ಲೈನ್ ಮನೆ ಕಾರ್ಮಿಕರಿಗೆ ಸರಿಯಾದ ವಸತಿಗಳಿಲ್ಲ, ಕುಡಿಯಲು ನೀರಿಲ್ಲ, ಮರಣ ಹೊಂದಿದಾಗ ಸಹ ಸಂಸ್ಕಾರ ಮಾಡಲು ಸ್ಮಶಾನ ಗಳಿಲ್ಲ, ಶಾಲಾ ಕಾಲೇಜುಗಳು  ಅವರಿಗೆ ಮರಿಚಿಕೆಯಾಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ತೋಟ ಕಾರ್ಮಿಕರು ಪ್ರತಿದಿನ ಪ್ರಕೃತಿಯೊಂದಿಗೆ ಯುದ್ಧ ಮಾಡುತ್ತಿದ್ದಾರೆ. ಅವರು ಹಾವುಗಳಿಗೆ, ಚೇಳುಗಳಿಗೆ ಮರದರೆಂಬೆ ಕೊಂಬೆಗಳಿಗೆ , ಕಾಡು ಪ್ರಾಣಿಗಳಿಗೆ ದಿನಂಪ್ರತಿ ಬಲಿಯಾಗುತ್ತಿದ್ದಾರೆ. ತೋಟ ಕಾರ್ಮಿಕರು ಪ್ರತಿದಿನ ರಕ್ತ ಸುರಿಸುತ್ತಿದ್ದಾರೆ. ಮಲೆನಾಡಿನಲ್ಲಿ ಮರಗಸಿ ಮಾಡುವ ಸಂದರ್ಭದಲ್ಲಿ ಕಾಳುಮೆಣಸನ್ನು ಕುಯ್ಯುವ ಸಂದರ್ಭದಲ್ಲಿ ವಿದ್ಯುತ್ ಶಾಕಿನಿಂದ , ಹಾಗೂ ಮರದ ರಂಬೆ ಕೊಂಬೆಗಳು ಮರಿದು ಅನೇಕ ಮಂದಿ  ಕಾರ್ಮಿಕರು  ಬಿದ್ದು ಮರಣ ಹೊಂದಿದ್ದಾರೆ. ತೋಟ ಕಾರ್ಮಿಕರಿಗೆ ಸರಿಯಾದ ಕೃಷಿ ಉಪಕರಣಗಳು ನೀಡದೆ ಗುಲಾಮರಂತೆ ದುಡಿಸಿಕೊಳ್ಳಲಾಗುತ್ತಿದೆ. ಮಹಿಳಾ ಕಾರ್ಮಿಕರು ಅನೇಕ ಗರ್ಭಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅವರು ತೋಟದಲ್ಲಿ  ರಾಸಾಯನಿಕ ವಸ್ತುಗಳನ್ನು ಬಳಸುವಾಗ ಮಾಲೀಕರು ಸರಿಯಾದ ಕೈ ಕವಚಗಳನ್ನು ನೀಡದ ರಾಸಾಯನಿಕ ವಸ್ತುಗಳನ್ನು ಬಳಸಿದ ನಂತರ ಸರಿಯಾಗಿ ಸ್ವಚ್ಛಗೊಳಿಸದೆ ,  ಎಲೆ, ಅಡಿಕೆ ಜಗಿಯಲು ತರಾತುರಿಯಲ್ಲಿ ಅದೇ ಕೈಗಳನ್ನು ಬಳಸುವುದರಿಂದ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸ್ವರ್ಗಕ್ಕೆ ಮೂರೇ ಗೇಣು ಎಂದು ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆ ಶೋಷಣೆಯ ಜಿಲ್ಲೆಯಾಗಿದೆ. ಇನ್ನೂ ಅಸ್ಸಾಂನಿಂದ ವಲಸೆ ಬಂದಿರುವ ಕಾರ್ಮಿಕರ ಬಾಧೇ ಹೇಳಾತೀರದು…ಈ ಚಿಕ್ಕ  ಮಾಹಿತಿ ಚಿಕ್ಕಮಗಳೂರು ಜಿಲ್ಲೆಯ ಕಾರ್ಮಿಕ ವರ್ಗದ ಶೋಷಣೆಯ  ಬದುಕಿನ ಪೀಠಿಕೆ ಅಷ್ಟೇ. ವಿಸ್ತರಿಸಿ ಬರೆದರೆ  ಮಹಾ ಪ್ರಬಂಧ ವಾಗುತ್ತದೆ… ಓದುಗರ ದೃಷ್ಟಿಯಿಂದ ಕೆಲವೊಂದು ಅಂಶಗಳನ್ನು ಮಾತ್ರ ದಾಖಲಿಸಲಾಗಿದೆ. ಒಟ್ಟಾರೆ ಆಫ್ರಿಕಾ ಖಂಡದ ಗುಲಾಮರಂತೆ ಬದುಕುತ್ತಿದ್ದಾರೆ ಲೈನ್ ಮನೆ ಕಾರ್ಮಿಕರು ಹಾಗೂ  ದುಡಿಯುವ  ತೋಟ ಕಾರ್ಮಿಕರು………….. ಆಫ್ರಿಕಾ ಖಂಡದಲ್ಲಿ ಕರಿಯರು ಬಿಳಿಯರು ಎಂದು ತಾರತಮ್ಯ ಮಾಡಲಾಗುತ್ತಿತ್ತು. ಹಾಗೆಯೇ ಜಿಲ್ಲೆಯಲ್ಲಿ ಅಮಾನವೀಯ  ಜಾತಿ ಪದ್ಧತಿಯ ಅಸ್ಪೃಶ್ಯತೆ ಆಚರಣೆ  ಇಂದಿಗೂ ಮಾಡಲಾಗುತ್ತಿದೆ… ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ “ಕಗ್ಗತ್ತಲೆಯ ಖಂಡ ಆಫ್ರಿಕಾ ದಂತೆ  ಕಗ್ಗತ್ತಲೆಯ ಜಿಲ್ಲೆ ಚಿಕ್ಕಮಗಳೂರು”. ಎನ್ನಬಹುದು…. ” ಶೋಷಿತ ಸಮುದಾಯಗಳ ಬಿಡುಗಡೆಗಾಗಿ ದಲಿತ ಸಂಘಟನೆ, ಕಾರ್ಮಿಕ ಸಂಘಟನೆ, ವಿವಿಧ ಪ್ರಗತಿಪರ ಸಂಘಟನೆ ಒಂದೇ ವೇದಿಕೆಯಲ್ಲಿ ತಮ್ಮ ತಮ್ಮ ಸೈಧ್ಯಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಪ್ರಭುತ್ವದೊಂದಿಗೆ ರಾಜೀ ಮಾಡಿಕೊಳ್ಳದೆ, ಪ್ರಭುತ್ವ ಮತ್ತು ಶೋಷಿತ ಸಮುದಾಯಗಳ ನಡುವೆ ದಲ್ಲಾಳಿತನವನ್ನು ಮಾಡುವುದನ್ನು ಬಿಟ್ಟು,  ಶೋಷಿತ ಸಮುದಾಯಗಳ ಬಿಡುಗಡೆಗಾಗಿ ಜಿಲ್ಲೆಯಲ್ಲಿ ಬೃಹತ್ ಹೋರಾಟ ರೂಪಿಸಿ “ಭೂಮಿತಿ” ಕಾಯ್ದೆ ಜಾರಿಗೆ ಒತ್ತಾಯಿಸಿ  ಜಿಲ್ಲೆಯಿಂದ ರಾಜ್ಯಧಾನಿಯವರೆಗೆ ಕಾಲ್ನಡಿಗೆ ಜಾಥಾವನ್ನು ಮಾಡಿ  “ಭೂಮಿತಿ” ಕಾಯ್ದೆಯನ್ನು ಜಾರಿಗೊಳಿಸಬೇಕಾಗಿದೆ. “ಕೊಟ್ಟಿದ್ದುಸಾಕು ಸೀರೆ ತಾಳಿ! ಭೂ ಹೀನರು ನಿಂತಿದ್ದೇವೆ ಭೂಮಿ ಕೇಳಿ ” ಎಂಬಾ ಘೋಷವಾಕ್ಯದಂತೆ ಭೂ ಹೀನರು  ಭೂಮಿಗಾಗಿ ಹೋರಾಟ  ರೂಪಿಸಬೇಕಾಗಿದೆ .    “ಭೂಮಿಯಿಂದಲೇ ಅನ್ನ ಭೂಮಿಯಿಂದಲೇ ಚಿನ್ನ” 

       ✍️ ಹರೀಶ್ ನಲ್ಕೆ ಸಂಶೋಧನಾ ಬರಹಗಾರರು….